ನವದೆಹಲಿ, ಅ.08 (DaijiworldNews/AK) : ವಿಮಾನದಲ್ಲಿ ಪ್ರಯಾಣಿಸುವಾಗ ಎಲ್ಲರೂ ತಮ್ಮ ತಮ್ಮ ಸೀಟಿನಲ್ಲಿ ಕುಳಿತು, ಸುರಕ್ಷತಾ ಸೂಚನೆಗಳನ್ನು ಪಾಲಿಸುವುದು ಸರ್ವೇ ಸಾಮಾನ್ಯ. ಆದರೆ ಇಂಡಿಗೋ (IndiGo) ವಿಮಾನದಲ್ಲಿ ಪ್ರಯಾಣಿಕರು ಸೀಟಿನಿಂದ ಎದ್ದು ನಿಂತು, ಒಂದು ಸಾಲಿನಿಂದ ಮತ್ತೊಂದು ಸಾಲಿಗೆ ಅಡ್ಡಾಡುತ್ತಾ, ಪರಸ್ಪರ ತಿಂಡಿ-ತಿನಿಸುಗಳನ್ನು ಹಂಚಿಕೊಳ್ಳುತ್ತಾ ಪ್ರಯಾಣಿಕರು ವರ್ತಿಸಿದ ರೀತಿ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಇನ್ನು ಈ ದೃಶ್ಯ ನೋಡಿದ ನೆಟ್ಟಿಗರು, ‘ಇದು ವಿಮಾನನಾ ಅಥವಾ ಲೋಕಲ್ ಟ್ರೈನಾ?’ ಎಂದು ಹಲವು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಥಾಯ್ಲೆಂಡ್ನ ಕ್ರಾಬಿಯಿಂದ ನವದೆಹಲಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನದ ಒಳಗಿನ ದೃಶ್ಯವನ್ನು ನೀರಾಜ್ ಪ್ರಿಯಾಂಕಾ ಚೌಧರಿ ಎಂಬ ಇನ್ಸ್ಟಾಗ್ರಾಂ ಬಳಕೆದಾರರು ವಿಡಿಯೊ ಮಾಡಿ ಹಂಚಿಕೊಂಡಿದ್ದಾರೆ.
ಕೆಲ ಪ್ರಯಾಣಿಕರು ವಿಮಾನದ ಮುಂಭಾಗದ ಸಾಲಿನ ಸೀಟುಗಳ ಸಮೀಪವಿರುವ ಹಾದಿಯಲ್ಲಿ (aisle) ನಿಂತಿರುವುದು ಮತ್ತು ಇನ್ನು ಕೆಲವರು ಸೀಟುಗಳಿಗೆ ಒರಗಿಕೊಂಡು ಸಂಬಂಧಿಕರೊಂದಿಗೆ ಹರಟೆ ಹೊಡೆಯುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಇನ್ನೂ ಕೆಲವರು ಪರಸ್ಪರ ತಿಂಡಿ ತಿನಿಸುಗಳನ್ನು ಕೈಯಿಂದ ಕೈಗೆ ವರ್ಗಾಯಿಸುತ್ತಿದ್ದರು. ಈ ವೇಳೆ ಇಬ್ಬರು ಕ್ಯಾಬಿನ್ ಸಿಬ್ಬಂದಿ ಪ್ರಯಾಣಿಕರಿಗೆ ತಮ್ಮ ಸೀಟುಗಳಿಗೆ ಮರಳಿ ಕುಳಿತುಕೊಳ್ಳುವಂತೆ ಮನವಿ ಮಾಡಿದರು. ಪ್ರಯಾಣಿಕರು ಅದನ್ನು ಲೆಕ್ಕಿಸದೆ ವಿಮಾನದೊಳಗೆ ನಿಂತು ಓಡಾಡುವುದನ್ನು ಮುಂದುವರಿಸಿದ್ದರು ಎಂದು ನೀರಜ್ ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ವಿಮಾನದ ಮೊದಲನೇ ಮತ್ತು ಐದನೇ ಸಾಲಿನಲ್ಲಿ ಕುಳಿತಿದ್ದ ಪ್ರಯಾಣಿಕರೇ ಎದ್ದು ಅಡ್ಡಾಡುತ್ತಾ, ಜೋರಾಗಿ ಮಾತನಾಡುತ್ತಾ ಇತರರಿಗೆ ತೊಂದರೆ ಉಂಟು ಮಾಡಿದ್ದಾರೆ. ವಿಮಾನದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗುವ ಸಾಧ್ಯತೆ ಇದ್ದ ಕಾರಣ ಸೀಟ್ ಬೆಲ್ಟ್ ಧರಿಸುವಂತೆ ಸೂಚನೆ ನೀಡಲಾಗಿದ್ದರೂ ಇವರು ಸೀಟಿನಲ್ಲಿ ಕುಳಿತುಕೊಳ್ಳಲು ಸಿದ್ಧರಿರಲಿಲ್ಲ. ವಿಮಾನ ಪ್ರಯಾಣಿಕರಿಗೆ ಕನಿಷ್ಠ ನಾಗರಿಕ ಪ್ರಜ್ಞೆಯಾದರೂ ಇರಬೇಕು ಎಂದು ನೀರಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಪ್ರಯಾಣಿಕರ ವರ್ತನೆಯನ್ನು ಟೀಕಿಸಿದರೆ, ಇನ್ನು ಕೆಲವರು ವಿಮಾನದ ಹಾದಿಯಲ್ಲಿ ಓಡಾಡುತ್ತಾ ಊಟ ಹಂಚಿಕೊಂಡ ದೃಶ್ಯವನ್ನು ನೋಡಿ, ‘ವಿಮಾನವನ್ನೇ ಲೋಕಲ್ ಟ್ರೈನ್ ಮಾಡಿದ್ದಾರೆ’ ಎಂದು ತಮಾಷೆ ಮಾಡಿದ್ದಾರೆ. ಮತ್ತಷ್ಟು ಮಂದಿ, ಇತರ ಪ್ರಯಾಣಿಕರಿಗೆ ತೊಂದರೆ ಆಗದಂತೆ ವಿಮಾನದಲ್ಲಿ ಶಿಸ್ತು ಪಾಲಿಸಬೇಕು ಎಂದು ಹೇಳಿದ್ದಾರೆ.