ಬಾಗಲಕೋಟೆ,ಅ.08 (DaijiworldNews/AK) : ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರಿಯಲ್ ಎಸ್ಟೇಟ್ ಮೇಲೆಯೇ ಎಲ್ಲಾ ಆಸಕ್ತಿ ಇದೆ. ರಾಜ್ಯದ ರೈತರ ಬಗ್ಗೆ, ಅವರ ಸಂಕಷ್ಟಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ರಿಯಲ್ ಎಸ್ಟೇಟ್ ಬಗ್ಗೆ ಮುಖ್ಯಮಂತ್ರಿಗಳು ಪರಿಣತರು. ಕಸದಿಂದ ರಸ ತೆಗೆಯಬಲ್ಲರು. ಆದರೆ ತೀವ್ರ ಬರದಿಂದ ನೋವಿನಲ್ಲಿರುವ ರೈತರ ಬಗ್ಗೆ ಅವರ ಗಮನವೇ ಇಲ್ಲ ಎಂದು ದೂರಿದರು.
ರೈತರಿಗೆ ಭಿಕ್ಷೆ ರೀತಿ ಪರಿಹಾರ ಘೋಷಣೆ
ಬಳ್ಳಾರಿ ಚಲೋ ನಡೆಸಿದಾಗ ನಾವು ಬರದಿಂದ ತತ್ತರಿಸಿರುವ ರೈತರ ರಕ್ಷಣೆಗೆ ರಾಜ್ಯ ಸರ್ಕಾರ ಬರಬೇಕು. ಪ್ರತಿ ಹೆಕ್ಟೇರ್ಗೆ 50 ಸಾವಿರ ಪರಿಹಾರ ಕೊಡಬೇಕು, 5 ಲಕ್ಷದವರೆಗೆ ರೈತರ ಕೃಷಿ ಸಾಲ ಮನ್ನಾ ಮಾಡಬೇಕು, ಹೈನುಗಾರಿಕೆಗೆ ಪೆÇ್ರೀತ್ಸಾಹ ನೀಡಬೇಕು ಎಂದು ಆಗ್ರಹಿಸಿದ್ದೆವು. ಬಳ್ಳಾರಿ ಚಲೋ ನಂತರ ವಿಶೇಷ ಅಧಿವೇಶನ ಕರೆದರು. ಇದರಲ್ಲಿ ಪ್ರಚಾರ ಗಿಟ್ಟಿಸಿಕೊಂಡರು. ರೈತರಿಗೆ ಭಿಕ್ಷೆ ರೀತಿ ಎರಡೂವರೆ ಸಾವಿರ ಕೊಡ್ತೇವೆ ಎಂದರು.
ಆದರೆ ಅದನ್ನೂ ಕೊಡಲಿಲ್ಲ. ಕೇವಲ ಘೋಷಣೆಗೆ ಸೀಮಿತವಾಯಿತು ಎಂದು ಹೇಳಿದರು.
ಉತ್ತರ ಕರ್ನಾಟಕದಲ್ಲಿ ಮಳೆ ಇಲ್ಲದೆ ಜನ ಮತ್ತು ಜಾನುವಾರುಗಳ ಸ್ಥಿತಿ ನೋಡಿದರೆ ದುಃಖವಾಗುತ್ತದೆ. ಕೆಲಸವಿಲ್ಲದೆ ಬೇರೆ ಕಡೆಗೆ ಜನ ಗುಳೇ ಹೋಗುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಯಾವುದರ ಕಡೆಗೂ ತಲೆಕೆಡಿಸಿಕೊಂಡಿಲ್ಲ ಎಂದು ಆಕ್ಷೇಪಿಸಿದರು.
ಹಣವಿಲ್ಲದಿದ್ದರೂ ಕೋಟಿ ಕೋಟಿ ಘೋಷಣೆ
ಬೊಕ್ಕಸದಲ್ಲಿ ಹಣವಿಲ್ಲದಿದ್ದರೂ ಮುಖ್ಯಮಂತ್ರಿಗಳು ಕೋಟಿ ಕೋಟಿ ಯೋಜನೆ ಘೋಷಣೆ ಮಾಡುತ್ತಾರೆ. ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಿ ಆ ಭಾಗದಲ್ಲಿ 32 ಸಾವಿರದ ಯೋಜನೆಗಳನ್ನು ಘೋಷಣೆ ಮಾಡಿದರು. ಎಲ್ಲವೂ ಪುಕ್ಕಟ್ಟೆ ಘೋಷಣೆ. ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿಗೆ ಇಳಿದಿದೆ ಎಂದು ಹಣಕಾಸು ಇಲಾಖೆ ಅಧಿಕಾರಿಗಳೇ ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ. ಆದರೆ ಸಿಎಂ ಮಾತ್ರ ಹೊಸ ಹೊಸ ಘೋಷಣೆ ಮಾಡುತ್ತಲೇ ಇದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಹಣ ಇಲ್ಲ. ಆಸ್ಪತ್ರೆ ಇದ್ದರೆ ವೈದ್ಯರಿಲ್ಲ. ಶಾಲೆ ಇದ್ದರೆ ಶಿಕ್ಷಕರಿಲ್ಲದ ಸ್ಥಿತಿ ಇದೆ. ಮುಖ್ಯಮಂತ್ರಿಗಳು ಕೇವಲ ಬೆಂಗಳೂರು ಅಭಿವೃದ್ಧಿಗೆ ಸೀಮಿತವಾಗಿದ್ದಾರೆ. ಆದರೆ ಬೆಂಗಳೂರೂ ಅಭಿವೃದ್ಧಿ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.