ನವದೆಹಲಿ, ಅ.08 (DaijiworldNews/AK) : ಮಂಜಿಲ್ ಸೈನಿ ಅವರು ಗರ್ಭಾವಸ್ಥೆಯಲ್ಲಿದ್ದಾಗಲೇ ಕಠಿಣ ಅಭ್ಯಾಸ ನಡೆಸಿ ಮೊದಲ ಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ ದೇಶದ ಮೊದಲ ವಿವಾಹಿತ ಮಹಿಳಾ ಐಪಿಎಸ್ ಅಧಿಕಾರಿಯಾಗಿದ್ದಾರೆ. ಅವರ ಸ್ಪೂರ್ತಿದಾಯಕ ಕಥೆ.

ಗರ್ಭಾವಸ್ಥೆಯ ಅತ್ಯಂತ ಸೂಕ್ಷ್ಮ ಸಮಯದಲ್ಲಿ ದೇಶದ ಅತ್ಯಂತ ಕಠಿಣ ಪರೀಕ್ಷೆ ಯುಪಿಎಸ್ಸಿಯನ್ನು ಮೊದಲ ಪ್ರಯತ್ನದಲ್ಲೇ ಪಾಸ್ ಮಾಡಿದ ಅಸಾಧಾರಣ ಮಹಿಳೆಯ ಕಥೆಯಿದು. ಅವರೇ ದೇಶದ ಮೊದಲ ವಿವಾಹಿತ ಮಹಿಳಾ ಐಪಿಎಸ್ ಅಧಿಕಾರಿ, 'ಲೇಡಿ ಸಿಂಘಂ' ಎಂದೇ ಪ್ರಸಿದ್ಧರಾದ ಮಂಜಿಲ್ ಸೈನಿ. 1975 ರಲ್ಲಿ ದೆಹಲಿಯಲ್ಲಿ ಜನಿಸಿದ ಮಂಜಿಲ್ ಸೈನಿ ಬಾಲ್ಯದಿಂದಲೂ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು. ದೆಹಲಿಯ ಪ್ರತಿಷ್ಟಿತ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಪದವಿ ಮುಗಿಸಿದ ಅವರು, ನಂತರ ಪ್ರಸಿದ್ಧ 'ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್' ನಿಂದ ಉನ್ನತ ಶಿಕ್ಷಣ ಪಡೆದು ಚಿನ್ನದ ಪದಕ ಗಳಿಸಿದರು. ಅಧ್ಯಯನ ಮುಗಿದ ನಂತರ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ತನ್ನ ಸಹಪಾಠಿಯಾಗಿದ್ದ ಜಸ್ಪಾಲ್ ದೇಹಲ್ ಅವರನ್ನು ಪ್ರೀತಿಸಿ ವಿವಾಹವಾದರು. ಸುಮಾರು ಮೂರು ವರ್ಷಗಳ ಕಾಲ ಖಾಸಗಿ ಕಾರ್ಪೊರೇಟ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರೂ, ದೇಶಸೇವೆ ಮಾಡುವ ತುಡಿತ ಅವರಲ್ಲಿದ್ದರಿಂದ ಉದ್ಯೋಗಕ್ಕೆ ರಾಜೀನಾಮೆ ನೀಡಿ ಯುಪಿಎಸ್ಸಿಗೆ ಸಿದ್ಧತೆ ನಡೆಸಲು ನಿರ್ಧರಿಸಿದರು.
2005 ರಲ್ಲಿ ಮಂಜಿಲ್ ಸೈನಿ ಗರ್ಭಿಣಿಯಾದಾಗ ದೈಹಿಕ ಆಯಾಸ ಮತ್ತು ಹೊಸ ಜೀವಕ್ಕೆ ಜನ್ಮ ನೀಡುವ ಜವಾಬ್ದಾರಿ ಅವರ ಮುಂದಿತ್ತು. ಹೆಚ್ಚಿನ ಮಹಿಳೆಯರು ಈ ಅವಧಿಯಲ್ಲಿ ವಿಶ್ರಾಂತಿಗೆ ಆದ್ಯತೆ ನೀಡಿದರೆ, ಮಂಜಿಲ್ ಈ ದೈಹಿಕ ಸವಾಲನ್ನೇ ತಮ್ಮ ಶಕ್ತಿಯನ್ನಾಗಿ ಮಾಡಿಕೊಂಡರು. ಗರ್ಭಾವಸ್ಥೆಯ ಕಷ್ಟಗಳ ನಡುವೆಯೇ ಕಠಿಣ ಅಭ್ಯಾಸ ನಡೆಸಿ, 2005 ರ ಯುಪಿಎಸ್ಸಿ ಪರೀಕ್ಷೆಯನ್ನು ತಮ್ಮ ಮೊದಲ ಯತ್ನದಲ್ಲೇ ಉತ್ತೀರ್ಣರಾದರು. ಈ ಮೂಲಕ ಭಾರತೀಯ ಪೊಲೀಸ್ ಸೇವೆಗೆ ಸೇರ್ಪಡೆಯಾದ ದೇಶದ ಪ್ರಥಮ ವಿವಾಹಿತ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರಿಗೆ ಉತ್ತರ ಪ್ರದೇಶ ಕೇಡರ್ ಲಭಿಸಿತು.
ಮೊರಾದಾಬಾದ್ನಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಆರಂಭಿಸಿದ ಮಂಜಿಲ್ ಸೈನಿ, 2008 ರಲ್ಲಿ ಉತ್ತರ ಪ್ರದೇಶ ಮತ್ತು ಹರಿಯಾಣ ಬೆಲ್ಟ್ನಲ್ಲಿ ನಡೆಯುತ್ತಿದ್ದ ದೇಶದ ಪ್ರಖ್ಯಾತ 'ಡಾ. ಅಮಿತ್ ಕುಮಾರ್ ಅಕ್ರಮ ಕಿಡ್ನಿ ದಂಧೆ'ಯನ್ನು ಬಯಲಿಗೆಳೆದರು. ಸಾರ್ವಜನಿಕ ವಲಯದಲ್ಲಿ 'ಲೇಡಿ ಸಿಂಘಂ' ಎಂಬ ಹೆಸರು ಬಂದಿತು. ಮೀರತ್ನಲ್ಲಿ ಅಪಹರಣಕ್ಕೊಳಗಾಗಿದ್ದ ವೈದ್ಯರನ್ನು ರಕ್ಷಿಸಲು ನಡೆಸಿದ ಅಪಾಯಕಾರಿ ಕಾರ್ಯಾಚರಣೆ ಹಾಗೂ ಪ್ರದರ್ಶಿಸಿದ ಸಾಹಸಕ್ಕಾಗಿ ಅವರಿಗೆ ರಾಷ್ಟ್ರಪತಿಗಳ ಶೌರ್ಯ ಪದಕ ಒಲಿದು ಬಂದಿತು.