ಗದಗ, ಅ.06 (DaijiworldNews/AK) : ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ನಡೆಸಿಸಿ ಬ್ಲ್ಯಾಕ್ಮೇಲ್ ಮಾಡುವ ಚರಿತ್ರೆ ಯಾರದ್ದು ಎಂಬುದು ಕಾಂಗ್ರೆಸ್ ಪಕ್ಷದ ಸಚಿವರು ಮತ್ತು ಶಾಸಕರನ್ನೇ ಕೇಳಿದರೆ ಗೊತ್ತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದರು.

ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸ್ಟಿಂಗ್ ಮಾಡಿಸಿ ಬ್ಲ್ಯಾಕ್ಮೇಲ್ ಮಾಡುವ ಚರಿತ್ರೆಯ ಬಗ್ಗೆ ಸಚಿವ ಎಚ್.ಕೆ. ಪಾಟೀಲರನ್ನು ಕೇಳಿದರೆ ಸಾಕು. ಏನು, ಯಾರದು ಎಂಬುದನ್ನು ಹೇಳುವುದಕ್ಕೆ ನಾನು ಹೋಗುವುದಿಲ್ಲ” ಎಂದು ಹೇಳಿದರು. ಸ್ಟಿಂಗ್ ಆಪರೇಷನ್ ಬಗ್ಗೆ ಸ್ವತಃ ಆಡಳಿತ ಪಕ್ಷದ ಶಾಸಕರು ಮಾತನಾಡುತ್ತಿದ್ದಾರೆ. ಸ್ಟಿಂಗ್ ಆಪರೇಷನ್ ನಡೆಸುತ್ತಿರುವ ಏಜೆನ್ಸಿಗಳು ಯಾವುವು ಎಂಬುದನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಜನತೆಯ ಮುಂದೆ ಸ್ಪಷ್ಟಪಡಿಸಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.
“ಮೊಬೈಲ್ ಸ್ವಿಚ್ ಆಫ್ ಮಾಡಿಸಿ, ಬಾಗಿಲು ಹಾಕಿಕೊಂಡು ಲಂಚ ಹೊಡೆಯಿರಿ ಎಂದು ಸಚಿವರಿಗೆ ಕಿವಿಮಾತು ಹೇಳುವ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಇಂತಹ ವ್ಯವಸ್ಥೆಯನ್ನು ನಡೆಸುತ್ತಿರುವವರು ಯಾರು ಎಂಬುದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು” ಎಂದು ಅವರು ಟೀಕಿಸಿದರು.
ಇದೇ ವೇಳೆ, ಇತ್ತೀಚೆಗೆ ಅತ್ಯುನ್ನತ ಪ್ರಭಾವಿ ನಾಯಕರೊಬ್ಬರು ಕೆಲವು ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಕರೆಸಿಕೊಂಡು, ಮೊಬೈಲ್ ಫೋನ್ಗಳನ್ನು ಸ್ವಿಚ್ ಆಫ್ ಮಾಡಿಸಿ ಮಾತನಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ವಿಜಯೇಂದ್ರ ಮಾಡಿದರು.
ಇಷ್ಟು ದಿನ 75 ರೂಪಾಯಿ ಕೊಡುತ್ತಿದ್ದೀರಿ, ಇನ್ನು ಮುಂದೆ 150 ರೂಪಾಯಿ ಕೊಡಬೇಕು ಎಂದು ಯಾಕೆ ಕೇಳಲಾಯಿತು? ಇಷ್ಟು ಕೊಡಲು ಸಾಧ್ಯವಿಲ್ಲ ಎಂದು ಉದ್ಯಮಿ ಹೇಳಿದಾಗ ರಾಜ್ಯ ಬಿಟ್ಟು ಹೋಗಿ ಎಂದು ಹೇಳಲಾಗಿದೆ. ಆ ಪ್ರಭಾವಿ ವ್ಯಕ್ತಿ ಯಾರು ಎಂಬುದನ್ನು ಮುಖ್ಯಮಂತ್ರಿಗಳು ತಿಳಿದುಕೊಂಡು ರಾಜ್ಯದ ಜನತೆಗೆ ಹೇಳಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.