ಮುಂಬೈ, ಅ.07 (DaijiworldNews/AK): ಬೃಹನ್ಮುಂಬೈ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಸಾರ್ವಜನಿಕ ಬೀದಿಗಳು ಮತ್ತು ರಸ್ತೆಗಳಲ್ಲಿ ಪಟಾಕಿ ಸಿಡಿಮದ್ದು ಮತ್ತು ರಾಕೆಟ್ಗಳನ್ನು ಸಿಡಿಸುವುದನ್ನು ಹಾಗೂ ಲೇಸರ್ ಲೈಟ್ ಮತ್ತು ತೀವ್ರ ಪ್ರಖರತೆಯುಳ್ಳ ಬೆಳಕಿನ ಕಿರಣಗಳ ಬಳಕೆಯನ್ನು ಮುಂಬೈ ಪೊಲೀಸರು ನಿಷೇಧಿಸಿದ್ದಾರೆ.

ಅಕ್ಟೋಬರ್ 6ರಿಂದ ಈ ಆದೇಶ ಜಾರಿಗೆ ಬಂದಿದ್ದು, ಡಿಸೆಂಬರ್ 4ರ ಮಧ್ಯರಾತ್ರಿಯವರೆಗೆ ನಿರ್ಬಂಧ ಮುಂದುವರಿಯಲಿದೆ. ಈ ಅವಧಿಗೂ ಮುನ್ನ ಆದೇಶವನ್ನು ಹಿಂಪಡೆಯದಿದ್ದರೆ ನಿಗದಿತ ಸಮಯದವರೆಗೆ ನಿಯಮಗಳು ಜಾರಿಯಲ್ಲಿರಲಿವೆ.
ನವರಾತ್ರಿ ಮತ್ತು ದೀಪಾವಳಿ ಸೇರಿದಂತೆ ಹಬ್ಬಗಳ ಸಂದರ್ಭದಲ್ಲಿ ಮುಂಬೈನಲ್ಲಿ ಪಟಾಕಿ ಹಾಗೂ ಹೆಚ್ಚಿನ ತೀವ್ರತೆಯ ಬೆಳಕುಗಳ ಬಳಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪಟಾಕಿಗಳಿಂದ ಉಂಟಾಗುವ ಶಬ್ದ ಮತ್ತು ವಾಯು ಮಾಲಿನ್ಯವನ್ನು ನಿಯಂತ್ರಿಸುವುದು ನಿರ್ಬಂಧದ ಪ್ರಮುಖ ಉದ್ದೇಶವಾಗಿದೆ.
ಬಾಂಬೆ ಹೈಕೋರ್ಟ್ ಸೆಪ್ಟೆಂಬರ್ 22ರಂದು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಹಲವು ನಿರ್ದೇಶನಗಳನ್ನು ನೀಡಿತ್ತು. ಸಾರ್ವಜನಿಕ ರಸ್ತೆಗಳು ಮತ್ತು ಬೀದಿಗಳಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ನ್ಯಾಯಾಲಯ ಸೂಚಿಸಿತ್ತು.
ಪಟಾಕಿಗಳಿಂದ ಉಂಟಾಗುವ ವಾಯು ಮತ್ತು ಶಬ್ದ ಮಾಲಿನ್ಯವನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು. ಇದರ ಜೊತೆಗೆ ಲೇಸರ್ ಲೈಟ್ಗಳು, ತೀವ್ರ ಪ್ರಖರತೆಯುಳ್ಳ ಬೆಳಕಿನ ಕಿರಣಗಳು ಮತ್ತು ಬೀಮ್ಗಳ ಬಳಕೆಯನ್ನು ನಿಷೇಧಿಸುವಂತೆಯೂ ಸೂಚಿಸಲಾಗಿತ್ತು. ಹೈಕೋರ್ಟ್ ನಿರ್ದೇಶನದ ಅನುಸಾರ ಮುಂಬೈ ಪೊಲೀಸರು ಬೃಹನ್ಮುಂಬೈ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಾರ್ವಜನಿಕ ರಸ್ತೆಗಳು, ಬೀದಿಗಳು ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ, ಸಿಡಿಮದ್ದು, ರಾಕೆಟ್ ಮತ್ತು ಇದೇ ರೀತಿಯ ವಸ್ತುಗಳ ಬಳಕೆಯನ್ನು ನಿಷೇಧಿಸಿದ್ದಾರೆ.