ಬೆಂಗಳೂರು, ಅ.07 (DaijiworldNews/AK): ರಾಜ್ಯದ ಜನತೆಗೆ ಒಂದಾದ ಮೇಲೊಂದು ಬೆಲೆ ಏರಿಕೆಯ ಬರೆ ಬೀಳುತ್ತಿದ್ದು ಮತ್ತೆ ಅಕ್ಕಿ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಸತತ ನಾಲ್ಕು ತಿಂಗಳಲ್ಲಿ 4ನೇ ಬಾರಿಗೆ ದರ ಹೆಚ್ಚಳವಾಗಿರುವ ಕಾರಣ ಜನರ ಜೇಬಿಗೆ ಇನ್ನಷ್ಟು ಕತ್ತರಿ ಬೀಳಲಿದೆ.

ಅಕ್ಕಿಯ ಬೆಲೆ :
ಹಿಂದಿನ ದರ (ಕೆಜಿಗೆ) ಹೊಸ ದರ (ಕೆಜಿಗೆ)
ಕೋಲಂ ಅಕ್ಕಿ 75 110
ಬಾಸುಮತಿ 105 120
ಜೀರಾ ರೈಸ್ 115 125
ರಾಜಮುಡಿ 125 150
ಸ್ಟೀಮ್ ಅಕ್ಕಿ 60 88
100ರ ಗಡಿ ತಲುಪಿದ ಸೋನಾ ಮಸೂರಿ ಅಕ್ಕಿ
ಸೋನಾ ಮಸೂರಿ ಅಕ್ಕಿಯ ದರ ಕೆ.ಜಿ.ಗೆ 100ರ ಗಡಿ ತಲುಪಿದ್ದು, ಚೀಲಕ್ಕೆ 400 ರೂ. ಹೆಚ್ಚಳವಾಗಿದೆ. ಕಳೆದ ಎರಡು ತಿಂಗಳಲ್ಲಿ ಸೋನಾ ಮಸೂರಿ ಅಕ್ಕಿ ದರ 390–400 ರೂಪಾಯಿಗಳಷ್ಟು ಹೆಚ್ಚಳ ಕಂಡಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಅಕ್ಕಿ ಕೆ.ಜಿ.ಗೆ 90 ರೂ. ತಲುಪಿದೆ. ಸತತ ದರ ಏರಿಕೆಯ ಪರಿಣಾಮ ಅಕ್ಕಿ ಕೊಳ್ಳಲು ಬರುವ ಗ್ರಾಹಕರು ದರ ಕೇಳಿಯೇ ಹಿಂದಿರುಗುತ್ತಿದ್ದಾರೆ. ಹೀಗಿದ್ದರೂ ಮುಂಬರುವ ದಿನಗಳಲ್ಲಿ ಅಕ್ಕಿ ಬೆಲೆ ಮತ್ತಷ್ಟು ಏರಿಕೆ ಆಗಬಹುದು ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಬೇಡಿಕೆಗೆ ಅನುಗುಣವಾಗಿ ಅಕ್ಕಿ ಪೂರೈಕೆ ಆಗದಿರುವುದೇ ಸತತವಾಗಿ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಮುಂಗಾರು ಕೈಕೊಟ್ಟಿರುವ ಕಾರಣ ರಾಯಚೂರು, ಸಿಂಧನೂರು, ಸಿರಗುಪ್ಪ , ಭದ್ರಾವತಿಭಾಗಗಳಲ್ಲಿ ಭತ್ತದ ಉತ್ಪಾದನೆಗೆ ಸರಿಯಾಗಿ ಆಗಿಲ್ಲ. ಜೊತೆಗೆ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲೂ 50 ಪರ್ಸೆಂಟ್ ಮಾತ್ರ ಅಕ್ಕಿ ಇಳುವರಿ ಬಂದಿರುವ ಪರಿಣಾಮ ಬೇಡಿಕೆ ಹೆಚ್ಚಾಗಿದೆ.