ನವದೆಹಲಿ, ಅ.07 (DaijiworldNews/AA): ಮಂಗಳವಾರ ತಡರಾತ್ರಿ ಉತ್ತರಾಖಂಡದ ಚಮೋಲಿಯಲ್ಲಿ 4.9 ತೀವ್ರತೆಯ ಭೂಕಂಪ ಸಂಭವಿಸಿದೆ. ಪರಿಣಾಮ ದೆಹಲಿ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲೂ ಕಂಪನದ ಅನುಭವ ಉಂಟಾಗಿದೆ.

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ 10:23ಕ್ಕೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆಯಲ್ಲಿ ಭೂಕಂಪಿಸಿದೆ. ಈ ಭೂಕಂಪದ ಕೇಂದ್ರಬಿಂದು ಜೋಶಿಮಠದಿಂದ 50 ಕಿ.ಮೀ ದಕ್ಷಿಣದಲ್ಲಿ 13 ಅಡಿ ಆಳದಲ್ಲಿ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಅಧಿಕೃತ ಮಾಹಿತಿ ನೀಡಿದೆ.
ಭೂಕಂಪನದ ಅನುಭವವಾಗುತ್ತಿದ್ದಂತೆ ನಿವಾಸಿಗಳು ಹೆದರಿ ಮನೆಗಳಿಂದ ಹೊರಗೆ ಓಡಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಅನಾಹುತಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಇನ್ನು ಅನೇಕರು ಭೂಕಂಪನದ ಅನುಭವದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.