ನವದೆಹಲಿ, ಅ.06 (DaijiworldNews/AA): ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರನ್ನು ಮುಂದಿನ ವಾಯುಸೇನಾ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.

ಅಕ್ಟೋಬರ್ 31 ರಂದು ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರು ನಿವೃತ್ತರಾಗಲಿದ್ದಾರೆ. ಅವರ ನಿವೃತ್ತಿಯಿಂದ ತೆರವಾಗುವ ಸ್ಥಾನಕ್ಕೆ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರು ನೇಮಕಗೊಳ್ಳಲಿದ್ದಾರೆ.
PVSM, AVSM, VM ಮತ್ತು VSM ಗೌರವಗಳಿಗೆ ಭಾಜನರಾಗಿರುವ ಏರ್ ಮಾರ್ಷಲ್ ದೀಕ್ಷಿತ್ ಅವರು ಪ್ರಸ್ತುತ ವಾಯುಪಡೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಶುತೋಷ್ ದೀಕ್ಷಿತ್ ಅವರು ಏರ್ ಚೀಫ್ ಮಾರ್ಷಲ್ ಹುದ್ದೆಯೊಂದಿಗೆ ವಾಯುಪಡೆಯ ೨೯ನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ದೀಕ್ಷಿತ್ ಅವರು 1986ರ ಡಿಸೆಂಬರ್ನಲ್ಲಿ ಭಾರತೀಯ ವಾಯುಪಡೆಯ (IAF) ಯುದ್ಧ ವಿಮಾನ ವಿಭಾಗಕ್ಕೆ ನಿಯೋಜನೆಗೊಂಡರು. ಪ್ರಾಯೋಗಿಕ ಪರೀಕ್ಷಾ ಪೈಲಟ್ ಮತ್ತು ಅರ್ಹ ಹಾರಾಟ ಬೋಧಕರಾಗಿರುವ ಏರ್ ಮಾರ್ಷಲ್ ದೀಕ್ಷಿತ್ ಅವರು 3,500 ಗಂಟೆಗಳಿಗೂ ಹೆಚ್ಚು ಹಾರಾಟದ ಅನುಭವವನ್ನು ಹೊಂದಿದ್ದಾರೆ. ಅವರು ಮಿರಾಜ್ 2000 ಸ್ಕ್ವಾಡ್ರನ್, ಪಶ್ಚಿಮ ವಲಯದ ಮುಂಚೂಣಿಯ ಯುದ್ಧವಿಮಾನ ನೆಲೆ ಹಾಗೂ ಪ್ರಮುಖ ಯುದ್ಧವಿಮಾನ ತರಬೇತಿ ನೆಲೆಯ ನೇತೃತ್ವವನ್ನು ವಹಿಸಿದ್ದಾರೆ.