ಬೆಂಗಳೂರು, ಅ.06 (DaijiworldNews/AA): ಹಾಲಿನ ದರ 8 ರೂ. ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ದಸರಾ, ದೀಪಾವಳಿ ಹೊತ್ತಲ್ಲೇ ರಾಜ್ಯದ ಜನತೆಗೆ ಸರ್ಕಾರ ಬಿಗ್ ಶಾಕ್ ನೀಡಿದೆ.

ಪ್ರತಿ ಲೀಟರ್ ಹಾಲಿನ ದರ 10 ರೂಪಾಯಿ ಹೆಚ್ಚಿಸಬೇಕೆಂದು ಹಾಲು ಮಾರಾಟ ಒಕ್ಕೂಟಗಳು ಮನವಿ ಮಾಡಿದ್ದವು. ಆದರೆ ಇದೀಗ ಸರ್ಕಾರ ಪ್ರತಿ ಲೀಟರ್ಗೆ 8 ರೂ. ಹೆಚ್ಚಳ ಮಾಡಲು ತೀರ್ಮಾನಿಸಿದೆ. ಬಹುತೇಕ ನವೆಂಬರ್ 1 ರಿಂದ ಹಾಲಿನ ದರ ಹೆಚ್ಚಳವಾಗುವ ಸಾಧ್ಯತೆಯಿದೆ. 80:20 ರಂತೆ ದರ ಏರಿಕೆ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಅಂದರೆ, 8 ರೂ. ಏರಿಕೆಯಾದರೆ 6 ರೂ. ರೈತರಿಗೆ ಮತ್ತು 2 ರೂ. ಒಕ್ಕೂಟಗಳಿಗೆ ಸಿಗಲಿದೆ.
ಇನ್ನು 8 ರೂಪಾಯಿ ಏರಿಕೆಗೆ ಸಚಿವ ಸಂಪುಟ ಸಹ ಸಮ್ಮತಿಸಿದೆ. ಆದರೆ ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಚುನಾವಣಾ ಆಯೋಗದ ಅನುಮತಿ ಪಡೆದು ದರ ಹೆಚ್ಚಳದ ಬಗ್ಗೆ ಅಧಿಕೃತ ಆದೇಶ ಹೊರಡಿಸಲಿದೆ.
ಹಾಲಿನ ದರದ ಜೊತೆಗೆ ಬಸ್ ಟಿಕೆಟ್ ದರ ಕೂಡ ಹೆಚ್ಚಳಕ್ಕೂ ಒಪ್ಪಿಗೆ ಸೂಚಿಸಲಾಗಿದೆ. ಆದರೆ, ಅಧಿಕೃತ ಘೋಷಣೆ ಮಾಡದಿರಲು ತೀರ್ಮಾನಿಸಿದೆ. ಚುನಾವಣಾ ಆಯೋಗಕ್ಕೆ ಪ್ರಸ್ತಾಪ ಕಳುಹಿಸಿ ಅವರ ಅನುಮತಿ ಸಿಕ್ಕ ಮೇಲೆ ಅಧಿಕೃತ ಘೋಷಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.