ರಾಮನಗರ, ಅ.06 (DaijiworldNews/TA): ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ನಡುರಾತ್ರಿ 2 ಗಂಟೆ ಸುಮಾರಿಗೆ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಖಾಸಗಿ ಕಾರ್ಯಕ್ರಮದ ನಿಮಿತ್ತ ತಡರಾತ್ರಿ ಚನ್ನಪಟ್ಟಣಕ್ಕೆ ಆಗಮಿಸಿದ್ದ ಸಚಿವರು, ಈ ವೇಳೆ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಆಸ್ಪತ್ರೆಯಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಜನರಲ್ ವಾರ್ಡ್, ಐಸಿಯು ಹಾಗೂ ಶೌಚಾಲಯಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ವೀಕ್ಷಿಸಿದರು. ಬಳಿಕ ಆಸ್ಪತ್ರೆಯ ಸಿಬ್ಬಂದಿಯ ಹಾಜರಾತಿ ಪರಿಶೀಲಿಸಿದ ಸಚಿವರು, ವೈದ್ಯರಿಂದ ಆಸ್ಪತ್ರೆಯ ಕಾರ್ಯವೈಖರಿ ಹಾಗೂ ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಕುರಿತು ಮಾಹಿತಿ ಪಡೆದುಕೊಂಡರು.
ಈ ವೇಳೆ ಆಸ್ಪತ್ರೆಯಲ್ಲಿ ಲಭ್ಯವಿರುವ ಔಷಧಿಗಳನ್ನು ನೀಡುವ ಬದಲು ಹೊರಗಿನ ಮೆಡಿಕಲ್ಗಳಿಗೆ ಔಷಧಿ ಬರೆದುಕೊಡುತ್ತಿರುವ ವಿಚಾರ ಸಚಿವರ ಗಮನಕ್ಕೆ ಬಂದಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಆಸ್ಪತ್ರೆಯಲ್ಲಿ ಇಷ್ಟೆಲ್ಲಾ ಸೌಲಭ್ಯಗಳು ಮತ್ತು ಔಷಧಿಗಳು ಲಭ್ಯವಿದ್ದರೂ ಹೊರಗಡೆ ಔಷಧಿ ಬರೆದುಕೊಡುವುದು ಏಕೆ ಎಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಸಚಿವ ಯು.ಟಿ. ಖಾದರ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದರು.