ನವದೆಹಲಿ, ಅ.05 (DaijiworldNews/TA): ನವರಾತ್ರಿ ಹಾಗೂ ದೀಪಾವಳಿ ಸೇರಿದಂತೆ ಹಬ್ಬದ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಅನಗತ್ಯವಾಗಿ ತೆರವುಗೊಳಿಸಬಾರದು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ಸ್ಥಳೀಯ ಮಾರಾಟಗಾರರು, ಬೀದಿಬದಿ ವ್ಯಾಪಾರಿಗಳು, ಕುಂಬಾರರು ಹಾಗೂ ಸಣ್ಣ ವ್ಯಾಪಾರಿಗಳ ಹಕ್ಕುಗಳನ್ನು ರಕ್ಷಿಸುವಂತೆ NHRC ನಿರ್ದೇಶನ ನೀಡಿದೆ.

ಅಗ್ನಿ ಸುರಕ್ಷತೆ ಅಥವಾ ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ವ್ಯಾಪಾರಿಗಳನ್ನು ತೆರವುಗೊಳಿಸುವುದು ಅನಿವಾರ್ಯವಾದ ಸಂದರ್ಭದಲ್ಲಿ ಅವರಿಗೆ ಪರ್ಯಾಯ ಮಾರಾಟ ಸ್ಥಳವನ್ನು ಒದಗಿಸಬೇಕು ಎಂದು ಆಯೋಗ ಸೂಚಿಸಿದೆ. ವ್ಯಾಪಾರಿಗಳ ಸರಕುಗಳನ್ನು ಯಾವುದೇ ನಿಯಮಬಾಹಿರ ರೀತಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಬಾರದು. ಹಬ್ಬದ ಸಂದರ್ಭದಲ್ಲಿ ಸಣ್ಣ ವ್ಯಾಪಾರಿಗಳು ಹಾಗೂ ಸ್ಥಳೀಯ ಮಾರಾಟಗಾರರಿಗೆ ಅನಗತ್ಯ ತೊಂದರೆ ನೀಡದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ.
ಬೀದಿಬದಿ ವ್ಯಾಪಾರಿಗಳಿಗೆ ಕಿರುಕುಳ ನೀಡುವುದು, ಸುಲಿಗೆ ಮಾಡುವುದು ಅಥವಾ ಅನಗತ್ಯವಾಗಿ ಹಸ್ತಕ್ಷೇಪ ಮಾಡುವ ಕುರಿತು ದೂರುಗಳು ಬಂದರೆ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು NHRC ನಿರ್ದೇಶನ ನೀಡಿದೆ. ಅದೇ ರೀತಿ ಸ್ಥಳೀಯ ವ್ಯಾಪಾರಿಗಳು ಹಾಗೂ ಸಾಂಪ್ರದಾಯಿಕ ಉದ್ಯಮಗಳಿಗೆ ಉತ್ತೇಜನ ನೀಡುವ ಮನೋಭಾವವನ್ನು ಹೊಂದುವಂತೆ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಸೂಚಿಸಲಾಗಿದೆ.
NHRC ನೀಡಿರುವ ನಿರ್ದೇಶನಗಳನ್ನು ಜಿಲ್ಲಾಧಿಕಾರಿಗಳು, ಪುರಸಭೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ತಲುಪಿಸುವಂತೆ ಸೂಚಿಸಲಾಗಿದೆ. ಈ ನಿರ್ದೇಶನಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಕುರಿತು ಅಕ್ಟೋಬರ್ 18ರೊಳಗೆ ಮಾಹಿತಿ ನೀಡುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ NHRC ಸೂಚನೆ ನೀಡಿದೆ.