ಒಡಿಶಾ, ಅ.05 (DaijiworldNews/TA): ಮೊಸಳೆಯ ಬಾಯಿಗೆ ಸಿಲುಕಿದ್ದ ಸಹೋದರನನ್ನು ರಕ್ಷಿಸಲು ಇಬ್ಬರು ಸಹೋದರರು ಸುಮಾರು ಒಂದೂವರೆ ಗಂಟೆಗಳ ಕಾಲ ನೀರಿನಲ್ಲೇ ಹೋರಾಡಿದ ಘಟನೆ ಒಡಿಶಾದ ಬೌಧ್ ಜಿಲ್ಲೆಯಲ್ಲಿ ನಡೆದಿದೆ. ತಮ್ಮ ಜೀವದ ಹಂಗನ್ನೂ ಲೆಕ್ಕಿಸದೆ ರಕ್ಷಣಾ ಕಾರ್ಯಕ್ಕೆ ಧುಮುಕಿದ ಛಬೀಂದ್ರ ಬೆಹೆರಾ ಮತ್ತು ಪ್ರಮೋದ್ ಪ್ರಧಾನ್ ಅವರ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಭಾನುವಾರ ಸಂಜೆ ಬೌಧ್ ಜಿಲ್ಲೆಯ ಹರ್ಭಂಗಾ ಬ್ಲಾಕ್ನ ಮರಾಡ ಮಹಾನದಿ ಘಾಟ್ನಲ್ಲಿ ಘಟನೆ ನಡೆದಿದೆ. ಮರಾಡ ಗ್ರಾಮದ ಸುಧೀರ್ ಬೆಹೆರಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಏಕಾಏಕಿ ಮೊಸಳೆಯೊಂದು ದಾಳಿ ಮಾಡಿದೆ. ಮೊಸಳೆ ಸುಧೀರ್ ಅವರನ್ನು ನೀರಿನೊಳಗೆ ಎಳೆಯಲು ಆರಂಭಿಸಿದಾಗ, ಅವರು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ.
ಸುಧೀರ್ ಅವರ ಕಿರುಚಾಟ ಕೇಳಿದ ಛಬೀಂದ್ರ ಮತ್ತು ಪ್ರಮೋದ್ ಕೂಡಲೇ ನದಿಗೆ ಧುಮುಕಿದ್ದಾರೆ. ಮೊಸಳೆಯ ಹಿಡಿತದಲ್ಲಿದ್ದ ಸುಧೀರ್ ಅವರನ್ನು ಬಿಡಿಸಲು ಇಬ್ಬರೂ ನಿರಂತರವಾಗಿ ಪ್ರಯತ್ನಿಸಿದ್ದಾರೆ. ಸುಮಾರು ಒಂದೂವರೆ ಗಂಟೆಗಳ ಕಾಲ ಮೊಸಳೆಯೊಂದಿಗೆ ಹೋರಾಡಿದ ಬಳಿಕ, ಕೊನೆಗೂ ಸಹೋದರನನ್ನು ಅದರ ಹಿಡಿತದಿಂದ ಹೊರಗೆಳೆದು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ವೇಳೆ ನದಿ ದಡದಲ್ಲಿ ಸಾಕಷ್ಟು ಮಂದಿ ಜಮಾಯಿಸಿದ್ದರು. ಆದರೆ ಮೊಸಳೆಯ ಭಯದಿಂದ ಯಾರೂ ನೀರಿಗೆ ಇಳಿಯಲು ಧೈರ್ಯ ಮಾಡಲಿಲ್ಲ. ಈ ವೇಳೆ ಛಬೀಂದ್ರ ಮತ್ತು ಪ್ರಮೋದ್ ಮಾತ್ರ ತಮ್ಮ ಜೀವದ ಅಪಾಯವನ್ನೂ ಲೆಕ್ಕಿಸದೆ ನೀರಿಗೆ ಧುಮುಕಿ ಸಹೋದರನ ರಕ್ಷಣೆಗೆ ಮುಂದಾಗಿದ್ದಾರೆ. ಮೊಸಳೆಯ ದಾಳಿಯಿಂದ ಸುಧೀರ್ ಬೆಹೆರಾ ಅವರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಮೊದಲು ಪುರುನಕಟಕ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಬಳಿಕ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ರಾತ್ರಿ ಸುಮಾರು 8.30ಕ್ಕೆ ಬೌಧ್ ಜಿಲ್ಲಾ ಪ್ರಧಾನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಬಳಿಕ ಮಹಾನದಿ ನದಿ ಪ್ರದೇಶದಲ್ಲಿ ಮೊಸಳೆಗಳ ಓಡಾಟದ ಬಗ್ಗೆ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ನದಿಗೆ ಇಳಿಯುವಾಗ ಎಚ್ಚರಿಕೆ ವಹಿಸುವಂತೆ ಸ್ಥಳೀಯರು ಹಾಗೂ ಅಧಿಕಾರಿಗಳು ಸೂಚಿಸಿದ್ದಾರೆ. ಇದೇ ವೇಳೆ, ಮೊಸಳೆಯ ಹಿಡಿತಕ್ಕೆ ಸಿಲುಕಿದ್ದ ಸಹೋದರನನ್ನು ರಕ್ಷಿಸಲು ಪ್ರಾಣದ ಹಂಗು ತೊರೆದು ಹೋರಾಡಿದ ಛಬೀಂದ್ರ ಬೆಹೆರಾ ಮತ್ತು ಪ್ರಮೋದ್ ಪ್ರಧಾನ್ ಅವರ ಧೈರ್ಯಕ್ಕೆ ಸ್ಥಳೀಯರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.