ನವದೆಹಲಿ,ಅ.05 (DaijiworldNews/AK) : ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿನ ಕಾನೂನುಬಾಹಿರತೆ ಹಾಗೂ ಶಾಸನಬದ್ಧ ‘ಫಾರ್ಮ್ 6’ ಬದಲಾವಣೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ನೇತೃತ್ವದ ಪೀಠ, ಮಾಧ್ಯಮ ವರದಿಯ ಆಧಾರದಲ್ಲಿ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣಕ್ಕೆ ಅಮಾನತುಗೊಳಿಸಲು ಅಥವಾ ಯಾವುದೇ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಅಷ್ಟೇ ಅಲ್ಲದೇ ವಿವಾದಿತ ನಿರ್ಧಾರಗಳಿಗೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿದೆ.
ಚುನಾವಣಾ ಆಯೋಗವು ಬಹು-ಸದಸ್ಯ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಇಬ್ಬರು ಚುನಾವಣಾ ಆಯುಕ್ತರ ಸಮ್ಮತಿ ಇಲ್ಲದೆ ಸಿಇಸಿ ಏಕಪಕ್ಷೀಯವಾಗಿ ತೀರ್ಮಾನಗಳನ್ನು ಕೈಗೊಂಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಈ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿದ ಸಿಜೆಐ ಸೂರ್ಯಕಾಂತ್, “ದಾಖಲೆಗಳು ನ್ಯಾಯಾಲಯದ ಮುಂದೆ ಬಂದಾಗ, ಮತದಾರರ ನೋಂದಣಿಗೆ ಬಳಸುವ ‘ಫಾರ್ಮ್ 6’ ಅನ್ನು ಯಾರು ಬದಲಾಯಿಸಿದರು ಎಂಬುದನ್ನು ನಾವು ಪರಿಶೀಲಿಸಲಿದ್ದೇವೆ. ಈ ತೀರ್ಮಾನಗಳನ್ನು ಕೇವಲ ಮುಖ್ಯ ಚುನಾವಣಾ ಆಯುಕ್ತರು ಒಬ್ಬರೇ ತೆಗೆದುಕೊಂಡಿದ್ದಾರೆಯೇ ಅಥವಾ ಆಯೋಗದ ಸರ್ವಾನುಮತ ಅಥವಾ ಬಹುಮತದಿಂದ ಅಂಗೀಕರಿಸಲಾಗಿದೆಯೇ ಎಂಬುದನ್ನು ತಿಳಿಯಬೇಕಿದೆ. ನೋಟಿಸ್ ನಂತರ, ನಿರ್ಧಾರಗಳನ್ನು ಒಮ್ಮತವಿಲ್ಲದೆ ತೆಗೆದುಕೊಳ್ಳಲಾಗಿದೆ ಎಂದು ಕಂಡುಬಂದರೆ, ಅಂತಹ ನಿರ್ಧಾರಗಳನ್ನು ನ್ಯಾಯಾಲಯ ಹಿಂಪಡೆಯಲಿದೆ” ಎಂದು ಸ್ಪಷ್ಟಪಡಿಸಿದರು.