ನವದೆಹಲಿ, ಅ.05 (DaijiworldNews/TA): ಭಾರತದ ಸ್ವದೇಶಿ ರಕ್ಷಣಾ ತಂತ್ರಜ್ಞಾನಕ್ಕೆ ಮತ್ತೊಂದು ಮಹತ್ವದ ಹೆಗ್ಗುರುತು ಸಿಕ್ಕಿದೆ. ದೇಶದ ಹೆಮ್ಮೆಯ ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ, ಭಾರತದ ರಕ್ಷಣಾ ರಫ್ತು ಆದಾಯವು 600 ಮಿಲಿಯನ್ ಡಾಲರ್ (ಸುಮಾರು ರೂ. 5,000 ಕೋಟಿಗೂ ಹೆಚ್ಚು) ಗಡಿ ದಾಟುವ ಹಾದಿಯಲ್ಲಿದೆ ಎಂದು ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಸುದ್ದಿಸಂಸ್ಥೆ ಎಎನ್ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯ ರಫ್ತು ಭಾರತದ ರಕ್ಷಣಾ ವಲಯಕ್ಕೆ ಹೊಸ ಅವಕಾಶಗಳನ್ನು ತೆರೆದಿದೆ ಎಂದು ಹೇಳಿದ್ದಾರೆ.

ಈಗಾಗಲೇ ಫಿಲಿಪೈನ್ಸ್ಗೆ ಸುಮಾರು 330 ಮಿಲಿಯನ್ ಡಾಲರ್ ಮೌಲ್ಯದ ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯನ್ನು ಭಾರತ ಪೂರೈಸಿದೆ. ಇದರ ಬೆನ್ನಲ್ಲೇ ಆಗ್ನೇಯ ಏಷ್ಯಾದ ಪ್ರಮುಖ ರಾಷ್ಟ್ರಗಳಾದ ವಿಯೆಟ್ನಾಂ ಮತ್ತು ಇಂಡೋನೇಷ್ಯಾಗೂ ಬ್ರಹ್ಮೋಸ್ ಕ್ಷಿಪಣಿ ಪೂರೈಸುವ ಒಪ್ಪಂದಗಳು ಅಂತಿಮ ಹಂತ ತಲುಪಿವೆ. ವಿಯೆಟ್ನಾಂಗೆ ಆರಂಭಿಕವಾಗಿ ಸುಮಾರು 100 ಮಿಲಿಯನ್ ಡಾಲರ್ ಹಾಗೂ ಇಂಡೋನೇಷ್ಯಾಗೆ ಸುಮಾರು 200 ಮಿಲಿಯನ್ ಡಾಲರ್ ಮೌಲ್ಯದ ಕ್ಷಿಪಣಿ ವ್ಯವಸ್ಥೆಗಳನ್ನು ರಫ್ತು ಮಾಡುವ ಒಪ್ಪಂದ ರೂಪುಗೊಂಡಿದೆ ಎಂದು ರಕ್ಷಣಾ ಕಾರ್ಯದರ್ಶಿ ತಿಳಿಸಿದ್ದಾರೆ.
ಬ್ರಹ್ಮೋಸ್ನ ವಾಯುಪಡೆ ಆವೃತ್ತಿಯನ್ನು ಭಾರತೀಯ ವಾಯುಪಡೆಯ ಸುಖೋಯ್-30 ಎಂಕೆಐ ಯುದ್ಧ ವಿಮಾನಗಳಲ್ಲಿ ಯಶಸ್ವಿಯಾಗಿ ಅಳವಡಿಸಲಾಗಿದೆ. ಈ ಮೂಲಕ ಬ್ರಹ್ಮೋಸ್ನ ಸಾಮರ್ಥ್ಯ ಮತ್ತಷ್ಟು ಹೆಚ್ಚಿದ್ದು, ಜಾಗತಿಕ ರಕ್ಷಣಾ ಮಾರುಕಟ್ಟೆಯಲ್ಲಿ ಕ್ಷಿಪಣಿಗೆ ಬೇಡಿಕೆ ಹೆಚ್ಚುತ್ತಿದೆ. ‘ಆಪರೇಷನ್ ಸಿಂಧೂರ್’ ಸಂದರ್ಭದಲ್ಲಿಯೂ ಬ್ರಹ್ಮೋಸ್ನ ಸಾಮರ್ಥ್ಯ ಗಮನ ಸೆಳೆದಿದೆ ಎಂದು ರಾಜೇಶ್ ಕುಮಾರ್ ಸಿಂಗ್ ಹೇಳಿದ್ದಾರೆ. ಬ್ರಹ್ಮೋಸ್ನ ಕಾರ್ಯಕ್ಷಮತೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಶ್ಲಾಘಿಸಿದ್ದರು. “ಬ್ರಹ್ಮೋಸ್ ಕೇವಲ ಒಂದು ಕ್ಷಿಪಣಿಯಲ್ಲ, ಬದಲಿಗೆ ಭಾರತದ ಸ್ವದೇಶಿ ಕೌಶಲ್ಯ ಮತ್ತು ಸಾರ್ವಭೌಮತ್ವದ ಜಾಗತಿಕ ಸಂಕೇತ” ಎಂದು ರಾಜನಾಥ್ ಸಿಂಗ್ ಬಣ್ಣಿಸಿದ್ದರು.
ಭಾರತದ ರಕ್ಷಣಾ ಉತ್ಪನ್ನಗಳು ಇದೀಗ 80ಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗುತ್ತಿವೆ. 2025-26ನೇ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ರಫ್ತು ರೂ. 38,424 ಕೋಟಿಗೆ ತಲುಪಿದ್ದು, ಇದು ದೇಶದ ರಕ್ಷಣಾ ರಫ್ತು ಕ್ಷೇತ್ರದ ಸಾರ್ವಕಾಲಿಕ ದಾಖಲೆಯಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ರೂ. 23,622 ಕೋಟಿ ಇದ್ದ ರಕ್ಷಣಾ ರಫ್ತು, 2025-26ರಲ್ಲಿ ರೂ. 14,802 ಕೋಟಿ ಹೆಚ್ಚಳದೊಂದಿಗೆ ಶೇ.62.66ರಷ್ಟು ಏರಿಕೆಯಾಗಿದೆ. ಸಾರ್ವಜನಿಕ ವಲಯದ ರಕ್ಷಣಾ ಸಂಸ್ಥೆಗಳ ರಫ್ತು ಶೇ.151ರಷ್ಟು ಏರಿಕೆಯಾಗಿದ್ದು, ರೂ. 21,071 ಕೋಟಿ ಮೌಲ್ಯದ ರಫ್ತು ದಾಖಲಿಸಿವೆ. ಒಟ್ಟು ರಕ್ಷಣಾ ರಫ್ತಿನಲ್ಲಿ DPSUಗಳ ಪಾಲು ಶೇ.54.84ರಷ್ಟಿದೆ. ಇದೇ ವೇಳೆ ಖಾಸಗಿ ರಕ್ಷಣಾ ಕಂಪನಿಗಳ ರಫ್ತು ಶೇ.14ರಷ್ಟು ಹೆಚ್ಚಳಗೊಂಡು ರೂ. 17,353 ಕೋಟಿಗೆ ತಲುಪಿದೆ. ಒಟ್ಟು ರಕ್ಷಣಾ ರಫ್ತಿನಲ್ಲಿ ಖಾಸಗಿ ವಲಯದ ಪಾಲು ಶೇ.45.16ರಷ್ಟಿದೆ. ಬ್ರಹ್ಮೋಸ್ನಂತಹ ಅತ್ಯಾಧುನಿಕ ಸ್ವದೇಶಿ ಶಸ್ತ್ರಾಸ್ತ್ರಗಳಿಗೆ ವಿದೇಶಗಳಲ್ಲಿ ಹೆಚ್ಚುತ್ತಿರುವ ಬೇಡಿಕೆ, ಭಾರತವನ್ನು ದೀರ್ಘಕಾಲದ ಪ್ರಮುಖ ರಕ್ಷಣಾ ಆಮದುದಾರ ದೇಶದಿಂದ ಪ್ರಮುಖ ರಕ್ಷಣಾ ರಫ್ತುದಾರ ರಾಷ್ಟ್ರವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.