ನವದೆಹಲಿ, ಅ.05 (DaijiworldNews/AA): ಭಾರತದ ಮೂರು ಸೇನಾ ಪಡೆಗಳಿಂದ (ಸೇನೆ, ನೌಕಾಪಡೆ, ವಾಯುಪಡೆ) ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ 'ಏಡ್-ಡಿ-ಕ್ಯಾಂಪ್' ಆಗಿ ನಿಯೋಜನೆಗೊಂಡ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಲೆಫ್ಟಿನೆಂಟ್ ಕಮಾಂಡರ್ ಯಶಸ್ವಿ ಬಿ ಸೊಲಂಕಿ ಅವರು ಪಾತ್ರರಾಗಿದ್ದಾರೆ.

ಸಾಮಾನ್ಯವಾಗಿ ರಾಷ್ಟ್ರಪತಿಗಳಿಗೆ ಸಹಾಯ ಮಾಡಲು ಐದು ಮಂದಿ ಎಡಿಸಿಗಳು ಇರುತ್ತಾರೆ. ಭೂಸೇನೆಯಿಂದ ಮೂವರು, ಹಾಗೂ ನೌಕಾಪಡೆ ಮತ್ತು ವಾಯುಪಡೆಯಿಂದ ತಲಾ ಒಬ್ಬರು. ಇದೀಗ ಯಶಸ್ವಿ ಸೊಲಂಕಿ ಅವರು 'ಏಡ್-ಡಿ-ಕ್ಯಾಂಪ್' ಆಗಿ ನೇಮಕಗೊಳ್ಳುವ ಮೂಲಕ ಭಾರತೀಯ ಸಶಸ್ತ್ರ ಪಡೆಗಳ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲೊಂದು ದಾಖಲಾಗಿದೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಔಪಚಾರಿಕ ಸಮಾರಂಭದಲ್ಲಿ ಮೇ 9, 2025 ರಂದು ಯಶಸ್ವಿ ಸೊಲಂಕಿ ಅವರಿಗೆ ಸಾಂಪ್ರದಾಯಿಕ 'ಎಗುಲೆಟ್' ತೊಡಿಸುವ ಮೂಲಕ ಈ ಐತಿಹಾಸಿಕ ಹುದ್ದೆಗೆ ಅಧಿಕೃತವಾಗಿ ಪದಗ್ರಹಣ ಮಾಡಿಸಲಾಯಿತು. ಇವರ ಸೇವಾ ಅವಧಿಯು ಸುಮಾರು ಎರಡೂವರೆಯಿಂದ ಮೂರು ವರ್ಷಗಳ ಕಾಲ ಇರಲಿದೆ. ಭದ್ರತಾ ತಪಾಸಣೆಗಳು, ಪ್ರತ್ಯೇಕ ತರಬೇತಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗಿನ ನೇರ ಸಂದರ್ಶನ ಒಳಗೊಂಡ ಕಠಿಣ ಆಯ್ಕೆ ಪ್ರಕ್ರಿಯೆಗಳ ನಂತರ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗಿದೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಯಶಸ್ವಿ ಸೊಲಂಕಿ ಅವರು, "ರಾಷ್ಟ್ರಪತಿಯವರ ಎಡಿಸಿ ಆಗುವುದು ತಮ್ಮ ಗುರಿಯಾಗಿರಲಿಲ್ಲ. ಏಕೆಂದರೆ ಇಂತಹ ಅವಕಾಶ ತಮಗೆ ಸಿಗಬಹುದು ಎಂದು ತಾವು ಎಂದಿಗೂ ಭಾವಿಸಿರಲಿಲ್ಲ. ಕ್ರೀಡಾ ಕ್ಷೇತ್ರವು ತಮ್ಮಲ್ಲಿ ಏಕಾಗ್ರತೆ ಮತ್ತು ಶಿಸ್ತನ್ನು ಬೆಳೆಸಲು ನೆರವಾಯಿತು. ಇದು ಮುಂದೆ ತಮ್ಮ ಮಿಲಿಟರಿ ವೃತ್ತಿಜೀವನಕ್ಕೆ ಪ್ರಮುಖ ಅಡಿಪಾಯವಾಯಿತು" ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಸೋಲಂಕಿ ಅವರು ರಕ್ಷಣಾ ಸೇವೆಗೆ ಸೇರುವ ಮೊದಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಹಾಗೂ ವಾಲಿಬಾಲ್ ಕ್ರೀಡಾಪಟುವಾಗಿದ್ದರು. ಯಶಸ್ವಿ ಅವರು 2019 ರಲ್ಲಿ ಭಾರತೀಯ ನೌಕಾಪಡೆಯ 'ನೆವಲ್ ಆರ್ಮಮೆಂಟ್ ಇನ್ಸ್ಪೆಕ್ಷನ್' ಕೆಡರ್ಗೆ ಅಧಿಕಾರಿಯಾಗಿ ಸೇರ್ಪಡೆಗೊಂಡರು. 3 ವರ್ಷಗಳ ಕಾಲ ಶಸ್ತ್ರಾಸ್ತ್ರಗಳ ಕಠಿಣ ತರಬೇತಿ ಮುಗಿಸಿದ ನಂತರ ಹೈದರಾಬಾದ್ನಲ್ಲಿ ನೌಕಾಪಡೆಯ ಪ್ರಮುಖ ರಕ್ಷಣಾ ಯೋಜನೆಗಳನ್ನು ನಿರ್ವಹಿಸಿರುತ್ತಾರೆ.
ಯಶಸ್ವಿ ಸೊಲಂಕಿ ಅವರ ಈ ಸಾಧನೆಯು ಅನೇಕ ಮಹಿಳಾ ಕ್ರೀಡಾಪಟುಗಳಿಗೆ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಅಧಿಕಾರಿಗಳಿಗೆ ಸ್ಫೂರ್ತಿಯಾಗಿದೆ. ಇನ್ನು ಯಶಸ್ವಿ ಸೊಲಂಕಿ ಅವರು ಎಡಿಸಿ ಆಗಿ ನೇಮಕಗೊಂಡ ಬೆನ್ನಲ್ಲೇ, ಜುಲೈ 2026 ರಲ್ಲಿ ಭಾರತೀಯ ಭೂಸೇನೆಯ ಮೇಜರ್ ನವ್ಯಾ ಶೇಖಾವತ್ ಅವರು ರಾಷ್ಟ್ರಪತಿಯವರ ಎರಡನೇ ಮಹಿಳಾ ಎಡಿಸಿ ಆಗಿ ನೇಮಕಗೊಂಡಿದ್ದಾರೆ. ನವ್ಯಾ ಶೇಖಾವತ್ ಅವರು ಭೂಸೇನೆಯಿಂದ ಎಡಿಸಿ ಆಗಿ ಆಯ್ಕೆಯಾದ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ.