ನವದೆಹಲಿ, ಅ.04 (DaijiworldNews/AA): ಜಾಗತಿಕ ಭೂ-ರಾಜಕೀಯದಲ್ಲಿ ಅಮೆರಿಕದ ನಿಲುವಿನಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಇದು ಉದ್ದೇಶಪೂರ್ವಕ ಆಯ್ಕೆಯ ಭಾಗವಾಗಿದೆ. ಅಮೆರಿಕವು ಉದ್ದೇಶಪೂರ್ವಕವಾಗಿ ಏಕಾಂಗಿಯಾಗುತ್ತಿರುವ ಶಕ್ತಿಯಾಗಿ ರೂಪುಗೊಳ್ಳುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ಮ್ಯೂನಿಚ್ ನಾಯಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, "ಜಾಗತಿಕ ರಾಜಕೀಯದ ಶಕ್ತಿಸಮೀಕರಣ ವೇಗವಾಗಿ ಬದಲಾಗುತ್ತಿದೆ. ಅಮೆರಿಕದ ವಿದೇಶಾಂಗ ನಿಲುವಿನಲ್ಲಿ ಮಹತ್ವದ ಬದಲಾವಣೆ ಮತ್ತು ಚೀನಾದ ಹೆಚ್ಚುತ್ತಿರುವ ಪ್ರಭಾವವು ಹೊಸ ಜಾಗತಿಕ ವ್ಯವಸ್ಥೆಗೆ ದಾರಿ ಮಾಡಿಕೊಡುತ್ತಿದೆ" ಎಂದು ಹೇಳಿದರು.
"ಇಂದು ಜಾಗತಿಕ ಭೂದೃಶ್ಯವು ಮುಖ್ಯವಾಗಿ ಅಮೆರಿಕದ ರ್ಯಾಡಿಕಲ್ ರಿಪೊಸಿಷನಿಂಗ್ನಿಂದ ಗುರುತಿಸಲ್ಪಡುತ್ತಿದೆ ಎಂಬುದನ್ನು ಇಲ್ಲಿ ಇರುವ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಇದು ಆಯ್ಕೆಯ ನಿಲುವಾಗಿದೆ. ಒಂದು ರೀತಿಯಲ್ಲಿ ಹೇಳುವುದಾದ್ರೆ, ಅಮೆರಿಕವು ಉದ್ದೇಶಪೂರ್ವಕವಾಗಿ ಏಕಾಂಗಿಯಾಗಿರುವ ಶಕ್ತಿಯಾಗಿ ಬದಲಾಗಿದೆ. ರ್ಯಾಡಿಕಲ್ ರಿಪೊಸಿಷನಿಂಗ್ ಎಂದರೆ ಒಂದು ಕಂಪನಿಯು ತನ್ನ ಬ್ರ್ಯಾಂಡ್, ಉತ್ಪನ್ನ ಅಥವಾ ಇಡೀ ವ್ಯವಹಾರದ ಗುರುತನ್ನ ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ಮತ್ತು ಆಮೂಲಾಗ್ರವಾಗಿ ಬದಲಾಯಿಸುವ ಒಂದು ಕಾರ್ಯತಂತ್ರವಾಗಿದೆ" ಅಭಿಪ್ರಾಯಪಟ್ಟರು.
"ಜಾಗತಿಕ ವ್ಯವಸ್ಥೆಯಲ್ಲಿ ಚೀನಾದ ಹೆಚ್ಚುತ್ತಿರುವ ಪ್ರಭಾವವೂ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದೆ. ಚೀನಾ ತನ್ನನ್ನು ವಿಶಿಷ್ಟ ದೇಶ ಎಂದು ಪರಿಗಣಿಸುತ್ತದೆ. ಹಲವು ವಿಚಾರಗಳಲ್ಲಿ ಜಾಗತಿಕ ಮಟ್ಟದಲ್ಲಿ ಚೀನಾದ ಸ್ಥಾನಮಾನವೂ ಈ ಸ್ವಯಂ-ಗ್ರಹಿಕೆಗೆ ಪೂರಕವಾಗಿದೆ. ಜಾಗತಿಕ ಪರಿಸ್ಥಿತಿಯ ೨ನೇ ಪ್ರಮುಖ ಅಂಶವೆಂದರೆ ಚೀನಾದ ಏರಿಕೆ. ಚೀನಾ ತನ್ನನ್ನು ವಿಶಿಷ್ಟ ದೇಶವೆಂದು ನೋಡುತ್ತದೆ. ಇದು ಅದರ ಸ್ವಯಂ-ಗ್ರಹಿಕೆಯಷ್ಟೇ ಅಲ್ಲ, ಹಲವು ರೀತಿಯಲ್ಲಿ ಜಗತ್ತಿನಲ್ಲಿ ಅದರ ವಾಸ್ತವಿಕ ಸ್ಥಾನಮಾನವೂ ಆಗಿದೆ" ಎಂದರು.
"ಪ್ರಮುಖ ಶಕ್ತಿಗಳ ನಡುವಿನ ಹೆಚ್ಚುತ್ತಿರುವ ಸ್ಪರ್ಧೆ ಇನ್ನು ಅಮೆರಿಕ ಮತ್ತು ಚೀನಾಕ್ಕೆ ಮಾತ್ರ ಸೀಮಿತವಾಗಿಲ್ಲ. ಯಾವುದೇ ದೇಶಗಳು ತಮ್ಮ ಬಳಿ ಇರುವ ಯಾವುದೇ ರೀತಿಯ ಪ್ರಭಾವ ಅಥವಾ ಸಾಮರ್ಥ್ಯವನ್ನ ಜಾಗತಿಕ ಸ್ಪರ್ಧೆಯಲ್ಲಿ ಅಸ್ತ್ರವಾಗಿ ಬಳಸುತ್ತಿವೆ. ತೀವ್ರವಾದ ಕಾರ್ಯತಂತ್ರದ ಪೈಪೋಟಿ ಇದ್ದರೂ ಆರ್ಥಿಕ ಮತ್ತು ರಾಜಕೀಯ ಪರಸ್ಪರ ಅವಲಂಬನೆಯೂ ಮುಂದುವರಿದಿದೆ" ಎಂದು ವಿವರಿಸಿದರು.