ಹಾವೇರಿ, ಅ.04 (DaijiworldNews/AA): ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದವರು ನಕಲಿ ಮತಗಳನ್ನ ಹಾಕಿಸಿಕೊಂಡು, ಒಂದೇ ವ್ಯಕ್ತಿ ಎರಡು ಕಡೆ ಮತಗಳನ್ನು ಹಾಕಿಸುವುದು ಅಥವಾ ಸತ್ತವರ ಹೆಸರಿನಲ್ಲಿ ಮತಗಳನ್ನು ಹಾಕಿಸಿಕೊಂಡು ಆಯ್ಕೆಯಾಗುತ್ತಿದ್ದರು. ಈಗ ಅವರಿಗೆ ಎಸ್ಐಆರ್ ನಿಂದ ತೊಂದರೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಆರಂಭದಿಂದಲೂ ಬಹಳ ಸರಳವಾಗಿ ನಡೆದುಕೊಂಡು ಬರುತ್ತಿತ್ತು. ಪ್ರಾರಂಭದಲ್ಲಿ ಕಾಂಗ್ರೆಸ್ನವರು ಅಲ್ಲಲ್ಲಿ ಮಸೀದಿಯಲ್ಲಿ ಅರ್ಜಿ ತುಂಬಿಸುವುದಕ್ಕೆ ನಾವು ವಿರೋಧಿಸಿದ್ದೇವು. ಆದರೆ ನಂತರದ ಕ್ರಮಗಳ ಪ್ರಕಾರ ಇದು ಸರಳವಾಗಿ ಮುಗಿಯಬೇಕಿತ್ತು. ಅಕ್ಟೋಬರ್ 8 ರಂದು ಕರಡು ಮತ ಪಟ್ಟಿಯನ್ನು ಕೊಡಬೇಕಾಗಿತ್ತು. ಇಂತ ಸಂದರ್ಭದಲ್ಲಿ ಕಾಂಗ್ರೆಸ್ ನವರು ಚುನಾವಣಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿ ಗೊಂದಲ ಸೃಷ್ಟಿಸಿದ್ದಾರೆ. ಸಿಎಂ ಡಿ.ಕೆ. ಶಿವಕುಮಾರ್ ಫೇಕ್ ಮತಗಳ ರಕ್ಷಣೆಗಾಗಿ ಚುನಾವಣಾಧಿಕಾರಿ ಕಚೇರಿ ಎದುರು ಧರಣಿ ನಡೆಸುವ ನಾಟಕವಾಡಿದ್ದಾರೆ" ಎಂದು ಆರೋಪ ಮಾಡಿದ್ದಾರೆ.
"ನಮ್ಮ ಪಕ್ಷದ ಪ್ರಮುಖರು ಚುನಾವಣಾಧಿಕಾರಿಯನ್ನ ಭೇಟಿ ಮಾಡಿ ಮನವಿ ಮಾಡಿದ್ದಾರೆ. ಈಗ ಕಾನೂನು ಪ್ರಕಾರ ಎಲ್ಲವೂ ಹೊರಬರುತ್ತಿದೆ. ರಾಜ್ಯ ಸರ್ಕಾರಕ್ಕೆ ನೇರವಾಗಿ ಇದರ ವಿರುದ್ಧ ಕೇಸ್ ಹಾಕುವ ಯಾವುದೇ ಅಧಿಕಾರವಿಲ್ಲ. ಇದು ಸಂಪೂರ್ಣವಾಗಿ ಚುನಾವಣಾ ಅಧಿಕಾರಿಗಳು ಮಾಡಬೇಕಾದ ಕೆಲಸ. ಕಾನೂನಿನ ಪ್ರಕಾರ ಅರ್ಹರ ಮತಗಳು ಮಾತ್ರ ರಕ್ಷಿಸಲ್ಪಡಬೇಕು ಮತ್ತು ಅನರ್ಹರ ಮತಗಳನ್ನು ತೆಗೆದುಹಾಕಬೇಕು ಎನ್ನುವುದು ನಮ್ಮ ಸ್ಪಷ್ಟ ನಿಲುವು" ಎಂದು ಹೇಳಿದರು.