ಕೊಯಮತ್ತೂರು, ಅ.04 (DaijiworldNews/TA): ಭಾರತೀಯ ನೌಕಾಪಡೆಯ ಸೂಕ್ಷ್ಮ ಹಾಗೂ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನದ ಬೇಹುಗಾರಿಕಾ ಜಾಲಕ್ಕೆ ಸೋರಿಕೆ ಮಾಡುತ್ತಿದ್ದ ಆರೋಪದ ಮೇಲೆ ನೌಕಾಪಡೆಯ ನಾವಿಕನೊಬ್ಬನನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಂಧಿಸಲಾಗಿದೆ.

ಬಂಧಿತನನ್ನು ಆಂಧ್ರಪ್ರದೇಶ ಮೂಲದ ರಾಜೇಶ್ ಎಂದು ಗುರುತಿಸಲಾಗಿದ್ದು, ನೌಕಾಪಡೆಯಲ್ಲಿ ತಾಂತ್ರಿಕ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎಂದು ತಿಳಿದುಬಂದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಪಾಕಿಸ್ತಾನಿ ಮಹಿಳಾ ಏಜೆಂಟ್ವೊಬ್ಬರ ಹನಿಟ್ರ್ಯಾಪ್ ಬಲೆಗೆ ಬಿದ್ದು ಆತ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ್ದಾನೆ ಎನ್ನಲಾಗಿದೆ.
ರಾಜೇಶ್ ಸಾಮಾಜಿಕ ಜಾಲತಾಣದ ಮೂಲಕ ಪಾಕಿಸ್ತಾನಿ ಮಹಿಳೆಯೊಬ್ಬಳ ಸಂಪರ್ಕಕ್ಕೆ ಬಂದಿದ್ದ. ಬಳಿಕ ಇಬ್ಬರ ನಡುವೆ ನಿಕಟ ಸಂಪರ್ಕ ಬೆಳೆದಿತ್ತು ಎನ್ನಲಾಗಿದೆ. ಇದೇ ಸಂಪರ್ಕವನ್ನು ಬಳಸಿಕೊಂಡು ಆ ಮಹಿಳಾ ಏಜೆಂಟ್ ನಾವಿಕನಿಂದ ಸೂಕ್ಷ್ಮ ಮಾಹಿತಿಗಳನ್ನು ಪಡೆದುಕೊಂಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ನೌಕಾಪಡೆಯ ಯುದ್ಧನೌಕೆಗಳ ಚಲನವಲನ, ನೌಕಾನೆಲೆಗಳಿಗೆ ಸಂಬಂಧಿಸಿದ ಮಾಹಿತಿ, ಸೇನಾ ಕಾರ್ಯಾಚರಣೆಗಳ ವಿವರಗಳು ಹಾಗೂ ರಹಸ್ಯ ದಾಖಲೆಗಳು ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ರವಾನಿಸಲಾಗುತ್ತಿತ್ತು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಕೇಂದ್ರ ಬೇಹುಗಾರಿಕಾ ಸಂಸ್ಥೆಗಳಿಂದ ದೊರೆತ ರಹಸ್ಯ ಮಾಹಿತಿಯ ಆಧಾರದ ಮೇಲೆ ತಮಿಳುನಾಡು ಪೊಲೀಸರು ಮತ್ತು ನೌಕಾಪಡೆಯ ಗುಪ್ತಚರ ವಿಭಾಗದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಕೊಯಮತ್ತೂರಿನಲ್ಲಿ ರಾಜೇಶ್ನನ್ನು ವಶಕ್ಕೆ ಪಡೆಯಲಾಗಿದೆ. ಆತನ ಬಳಿಯಿದ್ದ ಮೊಬೈಲ್ ಫೋನ್, ಲ್ಯಾಪ್ಟಾಪ್ ಸೇರಿದಂತೆ ಹಲವು ಡಿಜಿಟಲ್ ಸಾಧನಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಸಾಧನಗಳಲ್ಲಿರುವ ಮಾಹಿತಿ ಹಾಗೂ ಸಂವಹನದ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.
ಈ ಪ್ರಕರಣದ ಹಿಂದೆ ದೊಡ್ಡ ಬೇಹುಗಾರಿಕಾ ಜಾಲವೇ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆಯ ಬಗ್ಗೆ ತನಿಖಾ ಸಂಸ್ಥೆಗಳು ಪರಿಶೀಲನೆ ನಡೆಸುತ್ತಿವೆ. ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆಯಿದ್ದು, ಆರೋಪಿಯ ಆರ್ಥಿಕ ವ್ಯವಹಾರಗಳ ಬಗ್ಗೆಯೂ ತನಿಖೆ ಮುಂದುವರಿದಿದೆ. ರಕ್ಷಣಾ ಪಡೆಗಳ ಸಿಬ್ಬಂದಿ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ರಕ್ಷಣಾ ಇಲಾಖೆ ಮತ್ತೊಮ್ಮೆ ಸೂಚನೆ ನೀಡಿದೆ.