ಬೆಂಗಳೂರು, ಅ.04 (DaijiworldNews/TA): ಹಲವು ಸಿನಿಮಾಗಳು, ಧಾರಾವಾಹಿಗಳು ಹಾಗೂ ನಾಟಕಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದ ಹಿರಿಯ ಕಲಾವಿದೆ ಲಲಿತಮ್ಮ (65) ಅವರು ಇಂದು ನಿಧನರಾಗಿದ್ದಾರೆ. ಕಳೆದ ಎರಡೂವರೆ ತಿಂಗಳಿನಿಂದ ಸ್ಟ್ರೋಕ್ನಿಂದ ಬಳಲುತ್ತಿದ್ದ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಹಾಗೂ ಆರೈಕೆಯಲ್ಲಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಲಲಿತಮ್ಮ ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲದ ಸಂದರ್ಭದಲ್ಲಿ ‘ಅಮ್ಮನ ಮಡಿಲು ಟ್ರಸ್ಟ್’ ಅವರಿಗೆ ಆಶ್ರಯ ನೀಡಿತ್ತು. ಕಳೆದ ಹತ್ತು ದಿನಗಳಿಂದ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಟ್ರಸ್ಟ್ನ ಆಶ್ರಮದಲ್ಲಿ ಅವರಿಗೆ ಆರೈಕೆ ನೀಡಲಾಗುತ್ತಿತ್ತು. ಇದೀಗ ಅವರು ನಿಧನರಾಗಿರುವುದನ್ನು ಆಶ್ರಮದವರು ಖಚಿತಪಡಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಸುಂಟರಗಾಳಿ’ ಸಿನಿಮಾದಲ್ಲಿ ಲಲಿತಮ್ಮ ಅವರು ಖಳನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿನ ಪಾತ್ರ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ಇದರ ಜೊತೆಗೆ ‘ಜಂಗ್ಲಿ’, ‘ಲೈಫ್ ಇಷ್ಟೇನೆ’ ಸೇರಿದಂತೆ ಹಲವು ಸಿನಿಮಾಗಳಲ್ಲೂ ಅವರು ಅಭಿನಯಿಸಿದ್ದರು. ಕಿರುತೆರೆಯಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದ ಅವರು ‘ರಂಗೋಲಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು.
ಲಲಿತಮ್ಮ ಅವರು ಕೇವಲ ಸಿನಿಮಾಗಳಿಗಷ್ಟೇ ಸೀಮಿತರಾಗಿರಲಿಲ್ಲ. ರಂಗಭೂಮಿಯಲ್ಲೂ ಸಕ್ರಿಯರಾಗಿದ್ದ ಅವರು 180ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದರು. ಹಲವು ವರ್ಷಗಳ ಕಾಲ ರಂಗಭೂಮಿ ಹಾಗೂ ಕಿರುತೆರೆ, ಹಿರಿತೆರೆಯಲ್ಲಿ ತಮ್ಮ ಕಲಾ ಸೇವೆ ಸಲ್ಲಿಸಿದ್ದರು. ಲಲಿತಮ್ಮ ಅವರ ನಿಧನದ ಕುರಿತು ‘ಅಮ್ಮನ ಮಡಿಲು ಟ್ರಸ್ಟ್’ನ ಶಶಿಕಲಾ ಅವರು ವಿಡಿಯೋ ಮೂಲಕ ಸಂತಾಪ ಸೂಚಿಸಿದ್ದಾರೆ.
“ಲಲಿತಮ್ಮ ಅವರು 180ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದರು. ‘ರಂಗೋಲಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಇಂದು ಅವರು ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಶಶಿಕಲಾ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಹಿರಿಯ ಕಲಾವಿದೆ ಲಲಿತಮ್ಮ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಹಾಗೂ ಕಿರುತೆರೆ, ರಂಗಭೂಮಿ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.