ಚೆನ್ನೈ, ಅ.04 (DaijiworldNews/TA): ಖ್ಯಾತ ಸಿನಿಮಾ ನಿರ್ದೇಶಕ, ಬರಹಗಾರ, ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರು ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.

ಸುಮಾರು ಆರು ದಶಕಗಳ ಕಾಲ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಸಿಂಗೀತಂ ಶ್ರೀನಿವಾಸ ರಾವ್, ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ 60ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶಿಸಿದ್ದರು. ತಮ್ಮ ವಿಭಿನ್ನ ಕಥೆ ಹೇಳುವ ಶೈಲಿ ಹಾಗೂ ಸಾಮಾನ್ಯ ಕಥೆಗಳನ್ನೂ ಅದ್ಭುತವಾಗಿ ತೆರೆಗೆ ತರುವ ಸಾಮರ್ಥ್ಯದಿಂದ ಅವರು ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದರು.
ಕನ್ನಡ ಚಿತ್ರರಂಗದಲ್ಲಿ ಸಿಂಗೀತಂ ಶ್ರೀನಿವಾಸ ರಾವ್ ಅವರ ಕೊಡುಗೆ ಅಪಾರ. ‘ಆನಂದ್’ ಸಿನಿಮಾದ ಮೂಲಕ ನಟ ಶಿವರಾಜ್ಕುಮಾರ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಹೆಗ್ಗಳಿಕೆ ಅವರದ್ದು. ಇದೇ ಸಿನಿಮಾದ ಮೂಲಕ ಶಿವಣ್ಣ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇದರ ಜೊತೆಗೆ ‘ಹಾಲು ಜೇನು’, ‘ದೇವತಾ ಮನುಷ್ಯ’ ಸೇರಿದಂತೆ ಹಲವು ಪ್ರಮುಖ ಕನ್ನಡ ಸಿನಿಮಾಗಳಿಗೆ ಸಿಂಗೀತಂ ಶ್ರೀನಿವಾಸ ರಾವ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕನ್ನಡದ ಖ್ಯಾತ ನಟ ಡಾ. ರಾಜ್ಕುಮಾರ್ ಅವರ ಸಿನಿಮಾಗಳಿಗೂ ಅವರು ನಿರ್ದೇಶನ ನೀಡಿದ್ದರು. ಮೌನಚಿತ್ರವಾಗಿದ್ದ ‘ಪುಷ್ಪಕ ವಿಮಾನ’ ಅವರ ವೃತ್ತಿಜೀವನದ ಅತ್ಯಂತ ಗಮನಾರ್ಹ ಚಿತ್ರಗಳಲ್ಲೊಂದಾಗಿದೆ.
ತೆಲುಗು ಚಿತ್ರರಂಗದಲ್ಲೂ ಸಿಂಗೀತಂ ಶ್ರೀನಿವಾಸ ರಾವ್ ಹಲವು ಯಶಸ್ವಿ ಸಿನಿಮಾಗಳನ್ನು ನೀಡಿದ್ದಾರೆ. ‘ಆದಿತ್ಯ 369’, ‘ಭೈರವ ದ್ವೀಪ’ ಸೇರಿದಂತೆ ವಿಭಿನ್ನ ಕಥಾಹಂದರದ ಚಿತ್ರಗಳು ಅವರ ನಿರ್ದೇಶನದ ಪ್ರತಿಭೆಗೆ ಸಾಕ್ಷಿಯಾಗಿವೆ. ಕಮಲ್ ಹಾಸನ್, ಬಾಲಕೃಷ್ಣ ಸೇರಿದಂತೆ ದಕ್ಷಿಣ ಭಾರತದ ಹಲವು ಪ್ರಮುಖ ನಟರೊಂದಿಗೆ ಅವರು ಕೆಲಸ ಮಾಡಿದ್ದಾರೆ.
1931ರ ಸೆಪ್ಟೆಂಬರ್ 21ರಂದು ಜನಿಸಿದ ಸಿಂಗೀತಂ ಶ್ರೀನಿವಾಸ ರಾವ್ ಅವರು ನಿರ್ದೇಶಕರಾಗಿ ಮಾತ್ರವಲ್ಲದೆ ಬರಹಗಾರ, ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕರಾಗಿಯೂ ತಮ್ಮದೇ ಛಾಪು ಮೂಡಿಸಿದ್ದರು. ತೆಲುಗು, ತಮಿಳು, ಕನ್ನಡ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಲವು ಸಿನಿಮಾಗಳನ್ನು ನಿರ್ದೇಶಿಸಿ ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ವಯಸ್ಸು ಹೆಚ್ಚಾದರೂ ಸಿನಿಮಾ ಮೇಲಿನ ಅವರ ಆಸಕ್ತಿ ಮಾತ್ರ ಎಂದಿಗೂ ಕಡಿಮೆಯಾಗಿರಲಿಲ್ಲ. 94ನೇ ವಯಸ್ಸಿನಲ್ಲೂ ಮತ್ತೊಮ್ಮೆ ಸಿನಿಮಾ ರಂಗಕ್ಕೆ ಮರಳುವ ಮೂಲಕ ತಮ್ಮ ಸಿನಿಮಾ ಪ್ರೀತಿಯನ್ನು ಸಾಬೀತುಪಡಿಸಿದ್ದರು. ಸಿಂಗೀತಂ ಶ್ರೀನಿವಾಸ ರಾವ್ ಅವರ ನಿಧನದಿಂದ ಭಾರತೀಯ ಚಿತ್ರರಂಗದ ಹಿರಿಯ ಹಾಗೂ ವಿಶಿಷ್ಟ ಪ್ರತಿಭೆಯೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.