ನವದೆಹಲಿ, ಅ.04 (DaijiworldNews/TA): ಭಾರತದಲ್ಲಿ ಲಕ್ಷಾಂತರ ಯುವಜನರ ಕನಸು ಐಎಎಸ್ ಅಧಿಕಾರಿಯಾಗುವುದು. ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕವೂ ಕೆಲವರು ನಾಗರಿಕ ಸೇವೆಯತ್ತ ಹೆಜ್ಜೆ ಇಡುತ್ತಾರೆ. ಅಂತಹವರಲ್ಲಿ ಚಂಡೀಗಢದ ಡಾ. ಅಕ್ಷಿತಾ ಗುಪ್ತಾ ಕೂಡ ಒಬ್ಬರು.

MBBS ಪದವಿ ಪಡೆದಿದ್ದ ಡಾ. ಅಕ್ಷಿತಾ ಗುಪ್ತಾ, ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ಐಎಎಸ್ ಅಧಿಕಾರಿಯಾದರು. 2020ರಲ್ಲಿ ನಡೆದ ಪರೀಕ್ಷೆಯಲ್ಲಿ ಅವರು 69ನೇ ಅಖಿಲ ಭಾರತ ರ್ಯಾಂಕ್ ಪಡೆಯುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡರು. ಅಕ್ಷಿತಾ ಅವರ ತಂದೆ ಪವನ್ ಗುಪ್ತಾ ಪಂಚಕುಲದ ಸೀನಿಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾಗಿದ್ದು, ತಾಯಿ ಮೀನಾ ಗುಪ್ತಾ ಸರ್ಕಾರಿ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಗಣಿತಶಾಸ್ತ್ರದ ಉಪನ್ಯಾಸಕಿಯಾಗಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಅಕ್ಷಿತಾ ಅವರಿಗೆ ಐಎಎಸ್ ಅಧಿಕಾರಿಯಾಗಬೇಕೆಂಬ ಆಸೆ ಮೂಡಿತ್ತು. ಹೀಗಾಗಿ ವೈದ್ಯಕೀಯ ಶಿಕ್ಷಣದ ಮೂರನೇ ವರ್ಷದಲ್ಲೇ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. ವೈದ್ಯಕೀಯ ಕೆಲಸದ ಜವಾಬ್ದಾರಿಗಳ ನಡುವೆಯೂ ಪ್ರತಿದಿನ ಸುಮಾರು 13ರಿಂದ 14 ಗಂಟೆಗಳ ಕಾಲ ಅಧ್ಯಯನಕ್ಕೆ ಮೀಸಲಿಡುತ್ತಿದ್ದರು. ಕೆಲಸದ ಬಿಡುವಿನ ಸಮಯದಲ್ಲೂ ಓದಿದ್ದ ವಿಷಯಗಳನ್ನು ಪುನರ್ಅವಲೋಕನ ಮಾಡಿಕೊಳ್ಳುತ್ತಿದ್ದರು. ವೈದ್ಯಕೀಯ ಹಿನ್ನೆಲೆಯನ್ನೇ ಗಮನದಲ್ಲಿಟ್ಟುಕೊಂಡು ಮುಖ್ಯ ಪರೀಕ್ಷೆಯಲ್ಲಿ ವೈದ್ಯಕೀಯ ವಿಜ್ಞಾನವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು.
ಯುಪಿಎಸ್ಸಿ ತಯಾರಿಗಾಗಿ ಅಕ್ಷಿತಾ ಅವರು ತಮ್ಮದೇ ಆದ ಅಧ್ಯಯನ ತಂತ್ರವನ್ನು ರೂಪಿಸಿಕೊಂಡಿದ್ದರು. ಓದುವಾಗ ಪ್ರಮುಖ ಅಂಶಗಳನ್ನು ಅಂಡರ್ಲೈನ್ ಮಾಡುತ್ತಿದ್ದರು. ಬಳಿಕ ಆ ಅಂಶಗಳನ್ನು ಪದೇಪದೆ ಓದುವ ಮೂಲಕ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತಿದ್ದರು. ಯುಪಿಎಸ್ಸಿ ಪಠ್ಯಕ್ರಮಕ್ಕೆ ಅನುಗುಣವಾಗಿ ತಮ್ಮ ವೈದ್ಯಕೀಯ ಪುಸ್ತಕಗಳನ್ನು ಪರಿಶೀಲಿಸಿ, ಅಗತ್ಯವಿರುವ ಅಧ್ಯಾಯಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಓದುತ್ತಿದ್ದರು. ಹೀಗೆ ವೈದ್ಯಕೀಯ ವೃತ್ತಿಯ ಜವಾಬ್ದಾರಿಯ ಜೊತೆಗೆ ಯುಪಿಎಸ್ಸಿ ತಯಾರಿಯನ್ನೂ ಸಮರ್ಥವಾಗಿ ನಿರ್ವಹಿಸಿದ ಅವರು, ಮೊದಲ ಪ್ರಯತ್ನದಲ್ಲೇ 69ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾಗಿ ಹೊರಹೊಮ್ಮಿದರು. ಡಾ. ಅಕ್ಷಿತಾ ಗುಪ್ತಾ ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದಾರೆ. ಅವರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವೃತ್ತಿಜೀವನದ ಜೊತೆಗೆ ಪ್ರಕೃತಿಯ ಕುರಿತಾದ ಚಿತ್ರಗಳು ಹಾಗೂ ವಿವಿಧ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪ್ರಸ್ತುತ ಅವರು ಪಂಜಾಬ್ ಕೇಡರ್ನ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.