ತಿರುವನಂತಪುರಂ, ಅ.03 (DaijiworldNews/TA): ತೀವ್ರ ಹೊಟ್ಟೆನೋವು ಮತ್ತು ವಾಂತಿಯಿಂದ ಬಳಲುತ್ತಿದ್ದ 9 ವರ್ಷದ ಬಾಲಕಿಯೊಬ್ಬಳ ಹೊಟ್ಟೆ ಹಾಗೂ ಸಣ್ಣ ಕರುಳಿನಿಂದ ಬರೋಬ್ಬರಿ 1 ಕೆಜಿ ತೂಕದ ಕೂದಲಿನ ಉಂಡೆಯನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ತಿರುವನಂತಪುರಂ ಸಮೀಪದ ನೆಯ್ಯಾಟಿನ್ಕರಾದ ನಿಮ್ಸ್ ಮೆಡಿಸಿಟಿ ಆಸ್ಪತ್ರೆಯಲ್ಲಿ ಈ ಅಪರೂಪದ ಶಸ್ತ್ರಚಿಕಿತ್ಸೆ ನಡೆದಿದೆ.

ಬಾಲಕಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಅಲ್ಟ್ರಾಸೌಂಡ್, ಸಿಟಿ ಸ್ಕ್ಯಾನ್ ಹಾಗೂ ಎಂಡೋಸ್ಕೋಪಿ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸಿದಾಗ, ಹೊಟ್ಟೆ ಮತ್ತು ಕರುಳಿನಲ್ಲಿ ಭಾರಿ ಪ್ರಮಾಣದ ಕೂದಲು ಸಂಗ್ರಹವಾಗಿರುವುದು ಪತ್ತೆಯಾಗಿದೆ.
ಪೀಡಿಯಾಟ್ರಿಕ್ ಸರ್ಜರಿ ವಿಭಾಗದ ಹಿರಿಯ ವೈದ್ಯ ಡಾ. ಬಿಜು ಐ.ಜಿ. ನಾಯರ್ ನೇತೃತ್ವದ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ ಕೂದಲಿನ ಬೃಹತ್ ಉಂಡೆಯನ್ನು ಹೊರತೆಗೆದಿದೆ. ವೈದ್ಯಕೀಯವಾಗಿ ಇದನ್ನು ‘ಟ್ರಿಕೋಬೆಜೋರ್’ ಎಂದು ಕರೆಯಲಾಗುತ್ತದೆ. ಕೂದಲು ಹೊಟ್ಟೆಯಲ್ಲಿ ಜಮೆಯಾಗಿ ಉಂಡೆಯ ರೂಪ ಪಡೆದು, ಅದು ಸಣ್ಣ ಕರುಳಿನವರೆಗೂ ವಿಸ್ತರಿಸಿದಾಗ ಈ ಸ್ಥಿತಿಯನ್ನು ‘ರಪಂಜಲ್ ಸಿಂಡ್ರೋಮ್’ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಸ್ವಂತ ಕೂದಲನ್ನು ಕಿತ್ತುಕೊಂಡು ತಿನ್ನುವ ಅಭ್ಯಾಸದಿಂದ ಇಂತಹ ಸಮಸ್ಯೆ ಉಂಟಾಗಬಹುದು. ಕೂದಲು ಜೀರ್ಣವಾಗದ ಕಾರಣ ಕ್ರಮೇಣ ಹೊಟ್ಟೆಯಲ್ಲಿ ಸಂಗ್ರಹವಾಗಿ ಗಟ್ಟಿಯಾದ ಉಂಡೆಯಾಗಿ ರೂಪುಗೊಳ್ಳುತ್ತದೆ.
ಶಸ್ತ್ರಚಿಕಿತ್ಸೆಯ ಬಳಿಕ ಬಾಲಕಿ ಸಂಪೂರ್ಣ ಚೇತರಿಸಿಕೊಂಡಿದ್ದು, ಸಾಮಾನ್ಯ ಆಹಾರ ಸೇವನೆ ಆರಂಭಿಸಿದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ವೈದ್ಯರ ಪ್ರಕಾರ, ಇಂತಹ ಪ್ರಕರಣಗಳು ಅತ್ಯಂತ ಅಪರೂಪವಾಗಿದ್ದು, ಜಗತ್ತಿನಾದ್ಯಂತ ಈವರೆಗೆ 100ಕ್ಕೂ ಕಡಿಮೆ ಪ್ರಕರಣಗಳು ವರದಿಯಾಗಿವೆ.