ನವದೆಹಲಿ,ಅ.03 (DaijiworldNews/AK): ದೇಶಾದ್ಯಂತ ಅನ್ಯಾಯದ ವಿರುದ್ಧ ನಡೆಯುತ್ತಿರುವ ಹೋರಾಟಗಳು ಹಾಗೂ ಪ್ರತಿಭಟನೆಗಳನ್ನು ಒಂದೇ ವೇದಿಕೆಯಲ್ಲಿ ದಾಖಲಿಸಿ, ಜನರ ಧ್ವನಿಯನ್ನು ರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವ ಉದ್ದೇಶದಿಂದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ `ಸತ್ಯಾಗ್ರಹ’ ಹೆಸರಿನ ಹೊಸ ಡಿಜಿಟಲ್ ವೇದಿಕೆಯನ್ನು ಆರಂಭಿಸಿದ್ದಾರೆ.

ಗಾಂಧಿ ಜಯಂತಿ ಹಿನ್ನೆಲೆ ವೇದಿಕೆ ಆರಂಭಿಸಲಾಗಿದ್ದು, ಸತ್ಯ, ಅಹಿಂಸೆ ಹಾಗೂ ಅನ್ಯಾಯದ ವಿರುದ್ಧ ನಿರ್ಭೀತ ಪ್ರತಿರೋಧದ ಆಶಯಗಳನ್ನು ಇಂದಿನ ಹೋರಾಟಗಳಿಗೆ ಸಂಪರ್ಕಿಸುವ ಉದ್ದೇಶ ಹೊಂದಿದೆ. ದೇಶದ ವಿವಿಧ ಭಾಗಗಳಲ್ಲಿ ಜನರು ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಭೂಮಿ, ಮಹಿಳಾ ಹಕ್ಕುಗಳು, ದಲಿತರು, ಒಬಿಸಿ ಹಕ್ಕುಗಳು, ಶಿಕ್ಷಣ, ಪರೀಕ್ಷೆಗಳು ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿಭಟನೆಗಳು ನಡೆಯುತ್ತಿವೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. ಇಂತಹ ವಿವಿಧ ಹೋರಾಟಗಳನ್ನು ಸಂಘಟಿಸಿ, ಒಂದೇ ನಕ್ಷೆಯಲ್ಲಿ ದಾಖಲಿಸಿ, ಹೋರಾಟಗಾರರೊಂದಿಗೆ ಕೈಜೋಡಿಸಿ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನೆರವಾಗುವುದು ವೇದಿಕೆಯ ಉದ್ದೇಶವಾಗಿದೆ ಎಂದು ಹೇಳಿದರು.
`ಸತ್ಯಾಗ್ರಹ’ ವೆಬ್ಸೈಟ್ ಆರಂಭದ ಕುರಿತು ಮಾತನಾಡಿರುವ ರಾಹುಲ್ ಗಾಂಧಿ, ದೇಶದಾದ್ಯಂತ ಜನರು ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಪ್ರತಿಪಕ್ಷ ನಾಯಕನಾಗಿ ಅವರ ಹೋರಾಟವೂ ತಮ್ಮ ಹೋರಾಟವೇ ಆಗಿದ್ದು, ಜನರು ತಾವು ಯಾವ ವಿಚಾರಕ್ಕಾಗಿ ಹೋರಾಡುತ್ತಿದ್ದಾರೆ ಎಂಬುದನ್ನು ತಿಳಿಸುವಂತೆ ಕರೆ ನೀಡಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸಲು ತಾವು ಸಿದ್ಧರಿರುವುದಾಗಿ ನುಡಿದರು.