ಬೆಂಗಳೂರು,ಅ.03 (DaijiworldNews/AK): ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಮುಖ್ಯಮಂತ್ರಿಗಳು ನಮ್ಮ ಕಾರ್ಯಕರ್ತರ ಮೇಲೆ ಎಫ್ಐಆರ್ ಹಾಕಿಸಿ ಕಾನೂನು ಉಲ್ಲಂಘನೆ ಮಾಡಿದರೆ ನಾವು ಹೆದರುವುದಿಲ್ಲ. ಸರ್ಕಾರ ಮತ್ತು ಮುಖ್ಯಮಂತ್ರಿಗಳ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಅವರು ಹೇಳಿದ್ದಾರೆ.

ರಾಜ್ಯ ಪೊಲೀಸ್ ನಿರ್ದೇಶಕರಿಗೆ ಇಂದು ಮನವಿ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಮುನ್ನ ಹತ್ತು ಬಾರಿ ಯೋಚಿಸಿ ಎಂದು ಆಗ್ರಹ ಮಾಡಿದ್ದೇವೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಒತ್ತಡಕ್ಕೆ ಮಣಿದು ಪೊಲೀಸ್ ಸ್ಟೇಷನ್ ಗಳು ಕಾಂಗ್ರೆಸ್ ಕಚೇರಿಗಳಾದರೆ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಸಿದರು.
ಯಾವುದೇ ಠಾಣೆಗಳಲ್ಲಿ ಇನ್ಸ್ಪೆಕ್ಟರ್ ಗಳುಳು, ಡಿಸಿಪಿಗಳು ನಮ್ಮ ಕಾರ್ಯಕರ್ತರ ಮೇಲೆ ಎಸ್ಐಆರ್ ಸಂಬಂಧ ಕ್ರಮ ಕೈಗೊಂಡರೆ ಆ ಠಾಣೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದರು. ಮತದಾರರ ಪಟ್ಟಿಯ ಪರಿಷ್ಕರಣೆ ಇಂದು ನಿನ್ನೆ ಬಂದಿಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ನಡೆಯುತ್ತಲೇ ಇದೆ. ಮತದಾರರ ಹೆಸರು ಸೇರಿಸುವುದು, ಮತದಾರರ ಹೆಸರು ತೆಗೆಯುವ ಪ್ರಕ್ರಿಯೆ ಸಾಮಾನ್ಯ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಮಾತ್ರ ನಡೆಯುತ್ತಿಲ್ಲ. ಇದನ್ನು ಕಾಂಗ್ರೆಸ್ ಮುಖಂಡರು ಹಾಗೂ ಮುಖ್ಯಮಂತ್ರಿಗಳು ನೆನಪಿಡಬೇಕು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ 136 ಸೀಟು ಪಡೆದು ಅಧಿಕಾರದಲ್ಲಿದೆ. ಆಗಲೂ ಮತದಾರರ ಹೆಸರು ಸೇರಿಸುವುದು, ತೆಗೆಯುವುದು ನಡೆದಿತ್ತು. ಗೆದ್ದಾಗ ಚುನಾವಣಾ ಆಯೋಗ ಸರಿ ಇಲ್ಲ. ಸೋತಾಗ ತಪ್ಪು ಎಂಬ ಧೋರಣೆಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ ಎಂದು ಆಪಾದಿಸಿದರು. ಚುನಾವಣಾ ಆಯೋಗದ ಕಚೇರಿಗೆ ಬಂದು ಕೂತು ಧರಣಿ ಮಾಡಿದ ಮುಖ್ಯಮಂತ್ರಿಗಳು ಈಗ ಕಳ್ಳಾಟ ಮಾಡ್ತಾ ಇದ್ದಾರೆ ಎಂದು ವ್ಯಂಗ್ಯವಾಡಿದರು.
ಯಾವುದೇ ಕಾರಣಕ್ಕೂ ಬಿಜೆಪಿ ಕಾರ್ಯಕರ್ತರನ್ನು ಬಂಧಿಸದಂತೆ ಎಚ್ಚರಿಕೆ ನೀಡಿದ್ದೇವೆ. ಒಂದು ವೇಳೆ ಬಂಧಿಸಿದರೆ ಪೊಲೀಸ್ ಠಾಣೆಗಳ ಮುಂದೆ ಹೋರಾಟ ನಡೆಯಲಿದೆ ಎಂದರು.