ಶ್ರೀನಗರ, ಅ.03 (DaijiworldNews/AA): ಪಾಕ್ ಆಕ್ರಮಿತ ಕಾಶ್ಮೀರದ 17 ವರ್ಷದ ಬಾಲಕಿಯೊಬ್ಬಳು ಶುಕ್ರವಾರ ತಡರಾತ್ರಿ ಜಮ್ಮು ಮತ್ತು ಕಾಶ್ಮೀರದ ರಜೌರಿಯ ಗಡಿಯನ್ನು ದಾಟಿ ಭಾರತಕ್ಕೆ ಬಂದಿದ್ದು, ಆಕೆಯನ್ನು ಭದ್ರತಾ ಪಡೆಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ನೌಶೆರಾದ ಲಾಮ್ ವಲಯದಲ್ಲಿರುವ ನಿಯಂತ್ರಣ ರೇಖೆಯ ಬೇಲಿಯ ಬಳಿ ಬಾಲಕಿ ಓಡಾಡುತ್ತಿದ್ದಳು. ಈ ವೇಳೆ ಭಾರತೀಯ ಸೇನೆಯ ಗಸ್ತು ತಂಡ ಬಾಲಕಿಯನ್ನು ವಶಕ್ಕೆ ಪಡೆದು ವಿಚಾರಿಸಿದೆ. ಆಗ ಬಾಲಕಿ ಪಿಒಕೆಯ ಖುಯಿರೆಟ್ಟಾ ನಿವಾಸಿ ಎಂಬುದು ತಿಳಿದುಬಂದಿದೆ.
ಬಾಲಕಿ ಪತ್ತೆಯಾದ ಸ್ಥಳದಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿದ ಸೇನೆ, ಹೆಚ್ಚಿನ ವಿಚಾರಣೆಗೆ ಆಕೆಯನ್ನು ನೌಶೆರಾ ಪೊಲೀಸರಿಗೆ ಹಸ್ತಾಂತರಿಸಿದೆ. ವಿಚಾರಣೆಯ ವೇಳೆ, ತಾನು ಅರಿವಿಲ್ಲದೆ ಭಾರತದ ಕಡೆಗೆ ಬಂದಿರುವುದಾಗಿ ಬಾಲಕಿ ಹೇಳಿರುತ್ತಾಳೆ.
ಬಾಲಕಿ ಅರಿವಿಲ್ಲದೆ ಗಡಿ ದಾಟಿ ಬಂದಿರುವುದಾ ಅಥವಾ ಇದರ ಹಿಂದೆ ಬೇರೆ ಏನಾದರೂ ದುರುದ್ದೇಶವಿದೆಯೇ ಎಂಬುದರ ಬಗ್ಗೆ ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ.
ಅ.2 ರಂದು ಪಂಜಾಬ್ನ ತರನ್ತಾರನ್ ಜಿಲ್ಲೆಯ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಒಳನುಸುಳುವಿಕೆಗೆ ಯತ್ನಿಸಿದ ಇಬ್ಬರು ನುಸುಳುಕೋರರನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.