ಅಹಮದಾಬಾದ್, ಅ.02 (DaijiworldNews/AA): ಉತ್ತರಾಖಂಡದ ಬೆನ್ನಲ್ಲೇ ಇದೀಗ ಗುಜರಾತ್ನಲ್ಲಿಯೂ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ಅಧಿಕೃತ ಅನುಮೋದನೆ ದೊರೆತಿದೆ. ಗುಜರಾತ್ ವಿಧಾನಸಭೆ ಅಂಗೀಕರಿಸಿದ್ದ ಯುಸಿಸಿ ಮಸೂದೆಗೆ ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ.

ರಾಷ್ಟ್ರಪತಿಗಳ ಅನುಮೋದನೆಯ ಬೆನ್ನಲ್ಲೇ ರಾಜ್ಯ ಸರ್ಕಾರವು ಯುಸಿಸಿ ನಿಯಮಾವಳಿಗಳನ್ನು ಶೀಘ್ರದಲ್ಲೇ ಅಧಿಸೂಚಿಸಲಿದ್ದು, ತಕ್ಷಣದಿಂದಲೇ ಇಡೀ ರಾಜ್ಯಾದ್ಯಂತ ಈ ಕಾನೂನು ಅಧಿಕೃತವಾಗಿ ಅಸ್ತಿತ್ವಕ್ಕೆ ಬರಲಿದೆ. ಇದರೊಂದಿಗೆ ಏಕರೂಪ ನಾಗರಿಕ ಸಂಹಿತೆಯನ್ನು ಅಂಗೀಕಾರ ಮಾಡಿದ ಭಾರತದ ಎರಡನೇ ರಾಜ್ಯ ಎಂಬ ಹೆಗ್ಗಳಿಕೆಗೆ ಗುಜರಾತ್ ಪಾತ್ರವಾಗಿದೆ.
ಈ ಕಾನೂನಿನ ಪ್ರಕಾರ, ಜಾತಿ ಮತ್ತು ಧರ್ಮದ ಭೇದವಿಲ್ಲದೆ ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ಮದುವೆ, ವಿಚ್ಛೇದನ, ಜೀವನಾಂಶ, ಪಿತ್ರಾರ್ಜಿತ ಆಸ್ತಿ ಹಕ್ಕು ಮತ್ತು ದತ್ತು ಸ್ವೀಕಾರ ವಿಚಾರಗಳಲ್ಲಿ ಒಂದೇ ಕಾನೂನು ಚೌಕಟ್ಟು ಅನ್ವಯವಾಗಲಿದೆ. ಜೊತೆಗೆ ವಿವಾಹೇತರ ಸಹಜೀವನ ನಡೆಸುವ ಜೋಡಿಗಳು ಸ್ಥಳೀಯ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು, "ಈ ಕಾಯ್ದೆಯು ಗುಜರಾತ್ನ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಸಮಾನ ಹಕ್ಕು ಒದಗಿಸಲಿದೆ. ಇದು ಯಾರ ಸ್ವಾತಂತ್ರ್ಯವನ್ನೂ ಕಸಿದುಕೊಳ್ಳುವುದಿಲ್ಲ, ಯಾರ ಮೇಲೂ ತಾರತಮ್ಯ ಮಾಡುವುದಿಲ್ಲ. 2047ರ ವಿಕಸಿತ ಭಾರತ ನಿರ್ಮಾಣಕ್ಕೆ ಇದು ಬಲವಾದ ಹೆಜ್ಜೆ" ಎಂದು ತಿಳಿಸಿದ್ದಾರೆ.