ಬೆಂಗಳೂರು, ಸೆ.28 (DaijiworldNews/AA): ಕೇಂದ್ರದಿಂದ ಮೂರು ಬರ ಅಧ್ಯಯನ ತಂಡಗಳು ರಾಜ್ಯಕ್ಕೆ ಆಗಮಿಸಲಿದ್ದು, ವಿವಿಧೆಡೆಗಳಲ್ಲಿ ಬರ ಪರಿಸ್ಥಿತಿ ಕುರಿತು ಅವಲೋಕನ ನಡೆಸಲಿವೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೇಂದ್ರದ ಒಂದು ತಂಡ ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಭಾಗಗಳಿಗೆ ಭೇಟಿ ನೀಡಲಿದೆ. ಮತ್ತೊಂದು ತಂಡ ಉತ್ತರ ಕರ್ನಾಟಕ ಭಾಗದಲ್ಲಿ ಹಾಗೂ ಮೂರನೇ ತಂಡ ಮೈಸೂರು, ಮಂಡ್ಯ, ಚಾಮರಾಜನಗರ ಭಾಗಗಳಲ್ಲಿ ಬರ ಅಧ್ಯಯನ ನಡೆಸಲಿವೆ. ಈ ಮೂರು ತಂಡಗಳು ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದ ನಂತರ ಬರ ಪರಿಹಾರ ನಿಗದಿಯಾಗಲಿದೆ" ಎಂದು ಹೇಳಿದರು.
"ಕೇಂದ್ರದ ಮಾರ್ಗಸೂಚಿಗಳ ಪ್ರಕಾರವೇ ನಾವು ಬರದ ತಾಲೂಕುಗಳನ್ನು ಘೋಷಣೆ ಮಾಡಿದ್ದೇವೆ. ಕೇಂದ್ರ ತಂಡದವರೂ ಸಹ ಈ ತಾಲೂಕುಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ" ಎಂದರು.
"ಇಂದು ಮುಖ್ಯಮಂತ್ರಿ ಅವರು ದೆಹಲಿಗೆ ತೆರಳಿದ್ದು, ಕೇಂದ್ರದ ಸಚಿವರನ್ನು ಭೇಟಿಯಾಗಲಿದ್ದಾರೆ. ಕಸ್ತೂರಿ ರಂಗನ್ ವರದಿ ಹಾಗೂ ಬರದ ವಿಚಾರವಾಗಿ ಸರ್ವಪಕ್ಷ ನಿಯೋಗದೊಂದಿಗೆ ತೆರಳಲು ನಿರ್ಧರಿಸಲಾಗಿದೆ. ಈ ನಿಯೋಗದಿಂದ ಬಿಜೆಪಿ ಅವರು ಹೊರಗುಳಿಯಲು ಬಯಸಿದ್ದು ಮತ್ತೊಮ್ಮೆ ಅವರಿಗೆ ಮನವಿ ಮಾಡಿಕೊಳ್ಳುತ್ತೇವೆ. ಇಲ್ಲವಾದರೆ ನಾವೇ ನಿಯೋಗದಲ್ಲಿ ತೆರಳಿ ಕೇಂದ್ರಕ್ಕೆ ಮನವಿ ಮಾಡಿಕೊಳ್ಳುತ್ತೇವೆ" ಎಂದು ಮಾಹಿತಿ ನೀಡಿದರು.