ಮೈಸೂರು, ಸೆ.28 (DaijiworldNews/AA): ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಅದನ್ನು ಬಿಟ್ಟು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಡದಿ ಟೌನ್ ಶಿಪ್, ನೈಸ್ ಯೋಜನೆಯಲ್ಲಿ ರೈತರ ಹಿತರಕ್ಷಣೆ ಮತ್ತು ಅವರ ಹಕ್ಕುಗಳನ್ನು ಉಳಿಸುವ ನಿಟ್ಟಿನಲ್ಲಿ ತಮ್ಮ ಪಕ್ಷ ಹೋರಾಟ ಮುಂದುವರಿಸಲಿದೆ. ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಅದರ ನೀತಿಗಳು ರೈತ ವಿರೋಧಿಯಾಗಿದ್ದರೆ, ಹೋರಾಟ ನಡೆಸಲಾಗುವುದು" ಎಂದು ತಿಳಿಸಿದರು.
"ರೈತರ ನೈಜ ಸಮಸ್ಯೆಗಳನ್ನು ಅರಿಯಲು ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯಾದ್ಯಂತ 'ರೈತ ಯಾತ್ರೆ' ಆರಂಭವಾಗಿದೆ. ಮೊದಲ ಹಂತದಲ್ಲಿ ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿ ರೈತರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದಾರೆ. ತಮ್ಮ ಸರ್ಕಾರ ರೂಪಿಸಿದ ಜನಪರ ಯೋಜನೆಗಳನ್ನೇ ರಾಜ್ಯ ಸರ್ಕಾರ ಬಳಸಿಕೊಳ್ಳುತ್ತಿದೆ. ರಾಜ್ಯ ಸರ್ಕಾರದ ವೈಫಲ್ಯ ಕುರಿತಂತೆ ಶೀಘ್ರವೇ ಸೂಕ್ತ ದಾಖಲೆಗಳನ್ನು ಬಹಿರಂಗಪಡಿಸಲಾಗುವುದು" ಎಂದರು.
ಬರ ಹಾಗೂ ಪ್ರವಾಹ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಸಹಾಯ ಕೋರುತ್ತಿರುವ ಮುಖ್ಯಮಂತ್ರಿಗಳ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ತಾವು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಪರಿಹಾರಕ್ಕಾಗಿ ದೆಹಲಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲಿಲ್ಲ. ರಾಜ್ಯದ ಜನರ ತೆರಿಗೆ ರೂಪದ ಹಣವನ್ನೇ ಸಂಕಷ್ಟದಲ್ಲಿದ್ದ ರೈತರಿಗೆ ಹಾಗೂ ಜನರಿಗೆ ತಕ್ಷಣದ ಪರಿಹಾರವಾಗಿ ಒದಗಿಸಿದ್ದಾಗಿ ಹೇಳಿದರು.
ಹಾಲಿನ ದರ ಏರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, "ಪ್ರತಿನಿತ್ಯ ಹಾಲು ಬಳಸುವ ಬಡ ಕುಟುಂಬಗಳಿಗೆ ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಹೆಚ್ಚುವರಿ ಹಣ ನೀಡುವುದು ಕಷ್ಟಕರ. ಆದ್ದರಿಂದ, ಸರ್ಕಾರವೇ ರೈತರಿಗೆ ನೀಡುವ ಹಾಲಿನ ಪ್ರೋತ್ಸಾಹ ಧನವನ್ನು 5 ರಿಂದ 10 ರೂಪಾಯಿಗೆ ಹೆಚ್ಚಿಸಬೇಕು. ಬಡವರ ಮೇಲೆ ದರ ಏರಿಕೆ ಹೊರೆ ಹಾಕುವ ಬದಲು, ಸರ್ಕಾರವೇ ನೇರವಾಗಿ ರೈತರಿಗೆ ಪ್ರೋತ್ಸಾಹ ಧನ ನೀಡಬೇಕು" ಎಂದು ಒತ್ತಾಯಿಸಿದರು.