ನವದೆಹಲಿ, ಸೆ.28 (DaijiworldNews/AA): ದೊಡ್ಡ ವರ್ತಕರಿಗೆ ಮಾಡಲಾಗುವ 2,000 ರೂಗಿಂತ ಅಧಿಕ ಮೊತ್ತದ ಯುಪಿಐ ಪಾವತಿಗಳಿಗೆ ಎಂಡಿಆರ್ ಶುಲ್ಕ ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ.

ಅಡ್ವೋಕೇಟ್ ಅಂಜನ್ ದತ್ತಾ ಅವರು ಸಲ್ಲಿಸಿದ ಸಾರ್ಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಮಾಡಿದ ಸಿಜೆಐ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಯಮಾಲ್ಯ ಬಾಗ್ಚಿ ಮತ್ತು ವಿ ಮೋಹನಾ ಅವರಿರುವ ಸರ್ವೋಚ್ಚ ನ್ಯಾಯಪೀಠವು, ಎಂಡಿಆರ್ ದರಗಳನ್ನು ಯಾವ ಆಧಾರದ ಮೇಲೆ ನಿಗದಿ ಮಾಡಲಾಗಿದೆ. ಅದರ ಕಾನೂನು ಚೌಕಟ್ಟು ಏನಿದೆ ಎಂಬುದನ್ನು ವಿವರಿಸುವ ಒಂದು ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ಎಂಡಿಆರ್ ಎಂಬುದು ತೆರಿಗೆಯೋ ಅಥವಾ ಶುಲ್ಕವೋ, ಅಥವಾ ಎರಡೂ ಅಲ್ಲದಿದ್ದರೆ ಯಾವ ಆಧಾರದ ಮೇಲೆ ಅದನ್ನು ಹೇರಲಾಗುತ್ತಿದೆ ಎಂದು ಸುಪ್ರೀ ಪ್ರಶ್ನಿಸಿದೆ. ಈ ಕುರಿತು ವಿವರಣೆ ನೀಡಿದ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್ ವೆಂಕಟರಾಮನ್ ಅವರು, "ಎಂಡಿಆರ್ ತೆರಿಗೆ ಅಲ್ಲ, ಸರ್ಕಾರದ ಶುಲ್ಕವೂ ಅಲ್ಲ. ಆ ಹಣದಲ್ಲಿ ಒಂದು ಪೈಸೆಯೂ ಸರ್ಕಾರಕ್ಕೆ ಹೋಗಲ್ಲ. ಪೇಮೆಂಟ್ ಇಕೋಸಿಸ್ಟಂನೊಳಗೆ ಅದು ಒಂದು ಸೆಟಲ್ಮೆಂಟ್ ಫೀ ಆಗಿರುತ್ತದೆ. ಎಲೆಕ್ಟ್ರಾನಿಕ್ಸ್ ಪೇಮೆಂಟ್ಗಳನ್ನು ಪ್ರೋಸಸ್ ಮಾಡಲು ಬ್ಯಾಂಕು ಹಾಗೂ ಇತರ ಸಂಸ್ಥೆಗಳಿಗೆ ತಗಲುವ ವೆಚ್ಚಕ್ಕೆ ಪರಿಹಾರವಾಗಿ ಎಂಡಿಆರ್ ವಿಧಿಸಲಾಗುತ್ತಿದೆ. ಸಾಮಾನ್ಯ ಗ್ರಾಹಕರು ಮತ್ತು ಸಣ್ಣ ವರ್ತಕರಿಗೆ ಯಾವುದೇ ಶುಲ್ಕ ಇರುವುದಿಲ್ಲ" ಎಂದು ವಿವರಣೆ ನೀಡಿದರು.
ಅರ್ಜಿದಾರರು ಇದರ ಕಾನೂನು ಮಾನ್ಯತೆಯನ್ನೇ ಪ್ರಶ್ನಿಸಿದರು. 2,000 ರೂ ಮಿತಿ ಹೇಗೆ ಹಾಕಲಾಯಿತು, ಹಾಗು ಯುಪಿಐ ಮತ್ತು ರುಪೇ ಡೆಬಿಟ್ ಕಾರ್ಡ್ ಪೇಮೆಂಟ್ಗಳ ಮಧ್ಯೆ ಭಿನ್ನ ನೀತಿ ಯಾಕೆ ತರಲಾಯಿತು ಎಂದು ಅರ್ಜಿದಾರರು ಪ್ರಶ್ನಿಸಿದ್ದಾರೆ. ಸರ್ಕಾರದ ಈ ಕ್ರಮವು ವರ್ತಕರಿಗೆ ಹೆಚ್ಚುವರಿ ಹೊರೆ ಬೀಳುತ್ತದೆ. ಆ ಹೊರೆ ಇಳಿಸಲು ಪ್ರಯತ್ನದಲ್ಲಿ ಗ್ರಾಹಕರಿಗೆ ಪರೋಕ್ಷವಾಗಿ ಹೊರೆ ಬೀಳುತ್ತದೆ. ಹಾಗಾಗಿ, ಸರ್ಕಾರದ ಈ ನಿರ್ಧಾರ ಜಾರಿಯಾಗದಂತೆ ಮಧ್ಯಂತರವಾಗಿ ತಡೆ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ವಾದ ವಿವಾದ ಆಲಿಸಿದ ನ್ಯಾಯಾಲಯ ಅರ್ಜಿದಾರರ ಮನವಿಯಂತೆ ಕೇಂದ್ರದ ನಿರ್ಧಾರಕ್ಕೆ ತಡೆ ನೀಡಲು ನಿರಾಕರಿಸಿತು. ಆದರೆ, ಈ ವಿಚಾರದ ಬಗ್ಗೆ ವಿವರಣೆ ಕೋರಿ ಕೇಂದ್ರ ಸರ್ಕಾರ, ಆರ್ಬಿಐ ಮತ್ತು ಎನ್ಪಿಸಿಐ ಹಾಗೂ ಇತರ ಸಂಬಂಧಿತರಿಗೆ ನೋಟೀಸ್ ಜಾರಿ ಮಾಡಿದೆ.