ನವದೆಹಲಿ,ಸೆ.28 (DaijiworldNews/AK): ಸಾಮಾಜಿಕ ಜಾಲತಾಣಗಳಿಂದ ಅಪ್ರಾಪ್ತ ವಯಸ್ಕರ ಮೇಲಾಗುತ್ತಿರುವ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸೋಶಿಯಲ್ ಮೀಡಿಯಾ ಖಾತೆಗಳನ್ನು ತೆರೆಯುವುದನ್ನು ತಡೆಯಲು ಸೂಕ್ತ ವ್ಯವಸ್ಥೆ ಅಥವಾ ನಿಯಮಾವಳಿಗಳನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಅಪ್ರಾಪ್ತ ವಯಸ್ಕರು ಸಾಮಾಜಿಕ ಜಾಲತಾಣಗಳಿಗೆ ದಾಸರಾಗುತ್ತಿರುವುದು, ಸೈಬರ್ ಬುಲ್ಲಿಯಿಂಗ್, ಅಶ್ಲೀಲ ವಿಷಯಗಳಿಗೆ ಒಡ್ಡಿಕೊಳ್ಳುತ್ತಿರುವುದು ಮತ್ತು ಮಾನಸಿಕ ಆರೋಗ್ಯದ ಮೇಲೆ ಉಂಟಾಗುತ್ತಿರುವ ತೀವ್ರ ಪರಿಣಾಮಗಳ ಕುರಿತು ನ್ಯಾಯಪೀಠ ತೀವ್ರ ಕಳವಳ ವ್ಯಕ್ತಪಡಿಸಿದೆ.
‘ಜಸ್ಟ್ ರೈಟ್ಸ್ ಆಫ್ ಚಿಲ್ಡ್ರನ್ ಅಲಾಯನ್ಸ್’ ಸಂಘಟನೆ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ನಿಲುವು ತಳೆದಿದೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿನ ನಿಯಮಗಳನ್ನು ಒಪ್ಪಿ ಅಕೌಂಟ್ ತೆರೆಯಬೇಕಾಗುತ್ತದೆ. 18 ವರ್ಷದೊಳಗಿನ ವಯಸ್ಸಿನ ಮಕ್ಕಳು ಸ್ವಂತವಾಗಿ ಯಾವುದೇ ವಿಧದ ಒಪ್ಪಂದಕ್ಕೆ ಒಳಪಡಲು ಆಗುವುದಿಲ್ಲ ಎಂಬುದು ಅರ್ಜಿದಾರರ ವಾದವಾಗಿದೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಎಚ್ ಎಸ್ ಫೂಲ್ಕ ವಾದಿಸಿದರು
ಮಕ್ಕಳ ಸುರಕ್ಷತೆ ಮತ್ತು ಡಿಜಿಟಲ್ ಭದ್ರತೆಯನ್ನು ಕಾಯ್ದುಕೊಳ್ಳಲು ಕೇಂದ್ರ ಸರ್ಕಾರವು ಟೆಕ್ ಸಂಸ್ಥೆಗಳು ಮತ್ತು ಸಾಮಾಜಿಕ ಜಾಲತಾಣ ವೇದಿಕೆಗಳ ಜೊತೆ ಚರ್ಚಿಸಿ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.
ಕೇವಲ ಕಾನೂನು ನಿಯಮಗಳಿಂದ ಮಾತ್ರ ಇದನ್ನು ತಡೆಯಲು ಸಾಧ್ಯವಿಲ್ಲ. ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳು ಸಹ ಮಕ್ಕಳ ಡಿಜಿಟಲ್ ಚಟುವಟಿಕೆಗಳ ಮೇಲೆ ಕಣ್ಣಿಡಬೇಕು ಮತ್ತು ಸೈಬರ್ ಭದ್ರತೆಯ ಕುರಿತು ಜಾಗೃತಿ ಮೂಡಿಸಬೇಕು ಎಂದು ವಿಚಾರಣೆ ವೇಳೆ ಪ್ರಸ್ತಾಪಿಸಲಾಯಿತು.