ಚೆನ್ನೈ, ಸೆ.28 (DaijiworldNews/AK): ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ʻತಾಯ್ ಮಾಮನ್ ತಂಗ ಮೋದಿರಂʼ(ತಾಯಿಯ ಸಹೋದರನ ಚಿನ್ನದುಂಗುರ ಯೋಜನೆ) ಯೋಜನೆಗೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಚಾಲನೆ ನೀಡಿದರು. ಉದ್ಘಾಟನಾ ಸಮಾರಂಭದಲ್ಲಿ ಅವರು ನವಜಾತ ಶಿಶುವಿಗೆ 1 ಗ್ರಾಂ ಚಿನ್ನದ ಉಂಗುರ ತೊಡಿಸಿದರು.

ಆಸ್ಪತ್ರೆಯ ಹೆರಿಗೆ ವಾರ್ಡ್ಗೆ ಭೇಟಿ ನೀಡಿದ ಅವರು, ನವಜಾತ ಶಿಶುಗಳಿಗೆ ಆಶೀರ್ವದಿಸಿದರು. ಬಳಿಕ ಶಿಶುಗಳ ಪೋಷಕರಿಗೆ ಉಂಗುರಗಳನ್ನು ವಿತರಿಸಿದರು
ಟಿವಿಕೆ ಪಕ್ಷ ಚುನಾವಣೆಗೂ ಮುನ್ನ ಅಧಿಕಾರಕ್ಕೆ ಬಂದರೆ ಈ ಯೋಜನೆ ಜಾರಿಗೊಳಿಸುವ ಬಗ್ಗೆ ಘೋಷಿಸಿತ್ತು. ಈ ಯೋಜನೆ ಅಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಶಿಶುಗಳಿಗೆ ಸರ್ಕಾರವು ಒಂದು ಗ್ರಾಂ, 22 ಕ್ಯಾರೆಟ್ ಚಿನ್ನದ ಉಂಗುರವನ್ನು ನೀಡುತ್ತದೆ. ಈ ಯೋಜನೆಗೆ ಅರ್ಹತೆ ಪಡೆಯಲು, ನವಜಾತ ಶಿಶುಗಳ ತಾಯಂದಿರು ತಮಿಳುನಾಡಿನ ಖಾಯಂ ನಿವಾಸಿಗಳಾಗಿರಬೇಕು. ಈ ಯೋಜನೆಗಾಗಿ ರಾಜ್ಯ ಸರ್ಕಾರ ವಾರ್ಷಿಕ 755.83 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಈಗಾಗಲೇ 1.28 ಲಕ್ಷ ಉಂಗುರಗಳನ್ನು ಈಗಾಗಲೇ ಸಿದ್ಧಪಡಿಸಿ ಇಡಲಾಗಿದೆ. ಈ ಉಂಗುರಗಳು ವಿಶಿಷ್ಟ ಸರಣಿ ಸಂಖ್ಯೆಗಳನ್ನು ಹೊಂದಿರುತ್ತವೆ. ಟ್ಯಾಂಪರ್-ಪ್ರೂಫ್ ಪ್ಯಾಕೇಜಿಂಗ್ನಲ್ಲಿ ಈ ಉಂಗುರಗಳನ್ನು ವಿತರಿಸಲಾಗುತ್ತದೆ.
ಅರ್ಹ ಫಲಾನುಭವಿಗಳು ನೋಂದಾಯಿಸಿಕೊಂಡಿರಬೇಕು. ಅಲ್ಲದೇ ಮಕ್ಕಳ ಆರೋಗ್ಯ ಕಾರ್ಡ್ ID ಹೊಂದಿರಬೇಕು. ಫಲಾನುಭವಿಗಳು ಆಸ್ಪತ್ರೆಗಳಿಂದ ಬಿಡುಗಡೆಯಾದಾಗ ಉಂಗುರಗಳನ್ನು ನೀಡಲಾಗುತ್ತದೆ.