ನವದೆಹಲಿ, ಸೆ.28 (DaijiworldNews/AK): ಇಂದಿನಿಂದ (ಸೆ.28ರಿಂದ) ಸೆ.30ರವರೆಗೆ ರಾಷ್ಟ್ರವ್ಯಾಪಿ ನಡೆಯಬೇಕಿದ್ದ 3 ದಿನಗಳ ಬ್ಯಾಂಕ್ ಮುಷ್ಕರ ಕೊನೆ ಕ್ಷಣದಲ್ಲಿ ಮುಂದೂಡಲಾಗಿದೆ.

ಈ ಹಿನ್ನಲೆಯಲ್ಲಿ ಇಂದು ಎಲ್ಲಾ ಬ್ಯಾಂಕ್ಗಳ ಕಚೇರಿ ಸೇವೆಗಳು ಎಂದಿನಂತೆ ಸಾಮಾನ್ಯವಾಗಿ ಕಾರ್ಯನಿರ್ವಹಿಸಲಿದೆ. ಸೆ.28ರಿಂದ ಸೆ.30ರವರೆಗೆ ದೇಶಾದ್ಯಂತ ನಡೆಯಬೇಕಿದ್ದ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ ಎಂದು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಭಾನುವಾರ ತಡರಾತ್ರಿ ಹೇಳಿಕೆ ಬಿಡುಗಡೆ ಮಾಡಿದೆ.
ಮುಷ್ಕರಕ್ಕೆ ಕಾರಣವಾಗಿದ್ದ ವಾರದ ಪ್ರತಿ ಶನಿವಾರವೂ ಬ್ಯಾಂಕ್ಗಳಿಗೆ ರಜೆ ಘೋಷಿಸುವ ಕುರಿತು ದೀರ್ಘಕಾಲದಿಂದ ಬ್ಯಾಂಕ್ ಒಕ್ಕೂಟಗಳು ಹೊಂದಿದ್ದ ಬೇಡಿಕೆಯ ಕುರಿತು ಭಾನುವಾರ ತಡರಾತ್ರಿ 9:30ರ ಸುಮಾರಿಗೆ ಬ್ಯಾಂಕ್ಗಳ ಒಕ್ಕೂಟ ಹಾಗೂ ಭಾರತೀಯ ಬ್ಯಾಂಕುಗಳ ಸಂಘ ಸಭೆ ನಡೆಸಿದ್ದು, ಈ ಬೇಡಿಕೆಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ಒಪ್ಪಿಗೆ ಸಿಗುತ್ತಿದ್ದಂತೆ ಬ್ಯಾಂಕ್ ಒಕ್ಕೂಟಗಳು ತಮ್ಮ ಉದ್ದೇಶಿತ 3 ದಿನಗಳ ರಾಷ್ಟ್ರವ್ಯಾಪಿ ಮುಷ್ಕರವನ್ನು ಮುಂದೂಡಿವೆ. ಇನ್ನು 3 ದಿನಗಳ ಬ್ಯಾಂಕ್ ಮುಷ್ಕರವನ್ನು ಕೈಬಿಡಲು ಬ್ಯಾಂಕ್ ಒಕ್ಕೂಟಗಳು ನಿರ್ಧರಿಸಿರುವುದರಿಂದ ಸದ್ಯ ಬ್ಯಾಂಕ್ಗಳು ಓಪನ್ ಇರಲಿದ್ದು, ಎಂದಿನಂತೆ ಇಂದೂ ಕೂಡ ಸೇವೆಗಳು ಲಭಿಸಲಿವೆ.