ಚಂಡೀಗಢ, ಸೆ.28 (DaijiworldNews/AA): ಪ್ರತಿವರ್ಷ ಲಕ್ಷಾಂತರ ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯನ್ನು ಬರೆಯುತ್ತಾರೆ. ಈ ಪೈಕಿ ಅರ್ಹ ಅಭ್ಯರ್ಥಿಗಳಷ್ಟೇ ಉತ್ತೀರ್ಣರಾಗುವಲ್ಲಿ ಸಫಲಾರಗುತ್ತಾರೆ. ಹೀಗೆ 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ 25 ನೇ ರ್ಯಾಂಕ್ ಪಡೆದು ಉತ್ತೀರ್ಣರಾದ ಭಾವಿಕಾ ಚೋಪ್ರಾ ಅವರ ಯಶೋಗಾಥೆ ಇದು.

ಚಂಡೀಗಢದಲ್ಲೇ ಹುಟ್ಟಿ ಬೆಳೆದ ಭಾವಿಕಾ ಮೊದಲಿನಿಂದಲೂ ಶಿಕ್ಷಣದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಾ ಬಂದಿದ್ದಾರೆ. ಚಂಡೀಗಢದ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ ಅವರು, 12 ನೇ ತರಗತಿಯ ಮಂಡಳಿ ಪರೀಕ್ಷೆಯಲ್ಲಿ ಶೇ. 97.4 ರಷ್ಟು ಅತ್ಯುನ್ನತ ಅಂಕ ಗಳಿಸಿದ್ದರು.
ದೇಶ ಸೇವೆ ಮಾಡುವ ಉದ್ದೇಶದಿಂದ ಭಾವಿಕ ಅವರು ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸುತ್ತಾರೆ. 2023ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದ ಅವರು 476 ನೇ ರ್ಯಾಂಕ್ ಪಡೆದು ಇಂಡಿಯನ್ ಪೋಸ್ಟಲ್ ಸರ್ವಿಸ್ಗೆ (ಭಾರತೀಯ ಅಂಚೆ ಸೇವೆ) ಆಯ್ಕೆಯಾಗಿದ್ದರು.
ಆದರೆ ಭಾವಿಕ ಅವರಿಗೆ ಇನ್ನೂ ಉತ್ತಮ ರ್ಯಾಂಕ್ ಗಳಿಸುವ ಹಂಬಲವಿತ್ತು. ಅದರಂತೆ 2025ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 25 ನೇ ಅಖಿಲ ಭಾರತ ರ್ಯಾಂಕ್ ಗಳಿಸಿದರು. ಈ ಮೂಲಕ ಸಾವಿರಾರು ಅಭ್ಯರ್ಥಿಗಳಿಗೆ ಅವರು ಮಾದರಿಯಾಗಿದ್ದಾರೆ.