ನವದೆಹಲಿ, ಸೆ.19 (DaijiworldNews/AA): ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಆಂತರಿಕ ಕಲಹದಿಂದಾಗಿ, ಟಿಎಂಸಿಯ ಅಧಿಕೃತ ಹೆಸರು ಮತ್ತು ಚುನಾವಣಾ ಚಿಹ್ನೆ ಬಳಕೆಗೆ ತಡೆ ನೀಡಿರುವ ಕೇಂದ್ರ ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ಟಿಎಂಸಿ ಪಕ್ಷದ ಹೆಸರು ಮತ್ತು ಪಕ್ಷದ ಸಾಂಪ್ರದಾಯಿಕ 'ಹೂವು ಮತ್ತು ಹುಲ್ಲು' ಚಿಹ್ನೆಯನ್ನು ಬಳಸುವುದನ್ನು ಎರಡೂ ಬಣಗಳಿಗೆ ನಿರ್ಬಂಧಿಸಿ ಚುನಾವಣಾ ಆಯೋಗ ಸೆಪ್ಟೆಂಬರ್ 17ರಂದು ಮಹತ್ವದ ಆದೇಶ ಹೊರಡಿಸಿತ್ತು. ಈ ಆದೇಶದ ವಿರುದ್ಧ ಮಮತಾ ಬ್ಯಾನರ್ಜಿ ಅವರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ಮೂಲಕ ಚುನಾವಣಾ ಆಯೋಗದ ಮಧ್ಯಂತರ ಆದೇಶವನ್ನು ಪ್ರಶ್ನಿಸಲಾಗಿದೆ.
ಮುಂಬರುವ ಉಪಚುನಾವಣೆಗಳಿಗಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ 'ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್' ಹೆಸರು ಹಾಗೂ 'ಫುಟ್ಬಾಲ್ ಆಟಗಾರ' ಚಿಹ್ನೆ ನೀಡಲಾಗಿದ್ದರೆ, ಋತಬ್ರತಾ ಬ್ಯಾನರ್ಜಿ ಮತ್ತು ಅರೂಪ್ ರಾಯ್ ಬೆಂಬಲಿತ ಬಂಡಾಯ ಬಣಕ್ಕೆ 'ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್' ಹೆಸರು ಹಾಗೂ 'ಲಕೋಟೆ' ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ.
ಅಕ್ಟೋಬರ್ 6ರಂದು ನಂದಿಗ್ರಾಮ ಮತ್ತು ರೆಜಿನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆ ಆಯೋಗದ ಈ ಮಧ್ಯಂತರ ವ್ಯವಸ್ಥೆ ಮಹತ್ವ ಪಡೆದಿದೆ. ಈ ಉಪಚುನಾವಣೆಗಳಿಗಾಗಿ ಎರಡೂ ಬಣಗಳು ಹೊಸ ಹೆಸರು ಹಾಗೂ ಚಿಹ್ನೆಗಳನ್ನು ಬಳಸಬೇಕಾಗಿದೆ.