ಬೆಂಗಳೂರು, ಸೆ.19 (DaijiworldNews/AK): ಡಿ.ಕೆ.ಶಿವಕುಮಾರ್ ಅವರ ಸರಕಾರವು ಜನಹಿತದ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ. ಸಿ. ಮೋಹನ್ ಅವರು ಟೀಕಿಸಿದ್ದಾರೆ.

ಬೆಂಗಳೂರು ಕೇಂದ್ರ ಜಿಲ್ಲೆ ಗಾಂಧಿನಗರ ಮಂಡಲದ ಬಿನ್ನಿಪೇಟೆ ವಾರ್ಡ್ ನ ವಿಶ್ವಕರ್ಮ ಸಮುದಾಯ ಭವನದಲ್ಲಿ ಇಂದು ಬಿಜೆಪಿ ಯುವ ಮೋರ್ಚಾ ಬೆಂಗಳೂರು ಕೇಂದ್ರ ಜಿಲ್ಲಾ ವತಿಯಿಂದ ‘ಸೇವಾ ಸಂಕಲ್ಪ ಅಭಿಯಾನ’ದಡಿ ರಕ್ತದಾನ ಶಿಬಿರ ಮತ್ತು ಆರೋಗ್ಯ ಶಿಬಿರದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರ 76ನೇ ಜನ್ಮದಿನ ಹಾಗೂ ಆಡಳಿತದ ವಿವಿಧ ಹುದ್ದೆಗಳಲ್ಲಿ 25 ವರ್ಷಗಳ ನಿರಂತರ ಜನಸೇವೆಯ ಪ್ರಯಾಣವನ್ನು ಸ್ಮರಿಸುವ ಅಂಗವಾಗಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಬರ ಇದೆ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ರಾಜ್ಯ ಸರ್ಕಾರ ಏನು ಕೊಡಬೇಕೋ ಅದನ್ನು ಕೊಡಲಿ ಎಂದು ತಿಳಿಸಿದರು. ಬರ ಪರಿಹಾರ ವಿಚಾರದಲ್ಲಿ ರಾಜಕೀಯ ಸಲ್ಲದು ಎಂದು ನುಡಿದರು. ಐದು ಗ್ಯಾರೆಂಟಿಗೆ ಹಣ ಸಂಗ್ರಹಿಸಲು ಸರಕಾರವು ಎಲ್ಲ ವಸ್ತುಗಳ ಮೇಲೆ ದರ ಏರಿಸುತ್ತಿದೆ ಹಾಗೂ ತೆರಿಗೆ ಹಾಕುತ್ತಿದೆ ಎಂದು ಟೀಕಿಸಿದರು.
ಹಾಲಿನ ದರ ಏರಿಸಿದ್ದಾರೆ. ವಿದ್ಯುತ್, ನೀರಿನ ದರ ಹೆಚ್ಚಿಸಿದ್ದಾರೆ. ಆಸ್ಪತ್ರೆಗೆ ಹೋದರೂ ಅಲ್ಲಿನ ದರ ಏರಿಸಿದ್ದಾರೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಗೈಡೆನ್ಸ್ ವ್ಯಾಲ್ಯೂ ಜಾಸ್ತಿ ಮಾಡಿದ್ದಾರೆ. ನೋಂದಣಿ ಶುಲ್ಕವೂ ಹೆಚ್ಚಾಗಿದೆ. ಒಂದು ನೂರಕ್ಕೂ ಹೆಚ್ಚು ದಿನಬಳಕೆ ವಸ್ತುಗಳ ದರ ಏರಿಸಿದ್ದಾರೆ ಎಂದು ಟೀಕಿಸಿದರು.
ಬಸ್ಸುಗಳ ಪ್ರಯಾಣ ಮಹಿಳೆಯರಿಗೆ ಉಚಿತ ಎನ್ನುತ್ತಾರೆ; ಗಂಡಸರಿಗೆ ಪ್ರಯಾಣದರ ಜಾಸ್ತಿ ಮಾಡುತ್ತಾರೆ. ಅರ್ಧದಷ್ಟು ಬಸ್ಸುಗಳನ್ನು ಕೂಡ ನಿಲ್ಲಿಸಿದ್ದಾರೆ ಎಂದು ಟೀಕಿಸಿದರು. ಇಂತಹ ಪರಿಸ್ಥಿತಿ ಇರುವಾಗ ಇದನ್ನೆಲ್ಲ ಸುಧಾರಿಸೋದು ಬಿಟ್ಟು ಈ ರಾಜ್ಯ ಸರ್ಕಾರದವರು ಕೇಂದ್ರ ಸರ್ಕಾರದ ಕಡೆ ಬೊಟ್ಟು ತೋರಿಸೋದು ತಪ್ಪು ಎಂದು ಆಕ್ಷೇಪಿಸಿದರು.
ಯುಪಿಐ ಚಾರ್ಜಸ್ ಅತ್ಯಂತ ಕನಿಷ್ಠ ಇದೆ ಎಂದು ಅವರು ಸ್ಪಷ್ಟಪಡಿಸಿದರು. ಇದರಲ್ಲಿ ಕಾಂಗ್ರೆಸ್ಸಿನವರು ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು. ಭಾರತೀಯ ಜನತಾ ಪಾರ್ಟಿ ಮತ್ತೆ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಅವರು ಇನ್ನೊಂದು ಸಲ ಪ್ರಧಾನಮಂತ್ರಿಯಾಗಿ ಒಳ್ಳೆಯ ಕೆಲಸಗಳನ್ನು ಮುಂದುವರಿಸಬೇಕು ಎಂದು ಆಶಿಸಿದರು. ಪಕ್ಷವು ಹಮ್ಮಿಕೊಂಡಿರುವ ಸೇವಾ ಸಂಕಲ್ಪ ಅಭಿಯಾನದ ಕುರಿತು ಅವರು ಮಾಹಿತಿ ನೀಡಿದರು. ಬೆಂಗಳೂರಿನ ಯೋಜಿತ ಅಭಿವೃದ್ಧಿ ಕಾರ್ಯ ನಡೆಸಬೇಕೆಂದು ಅವರು ಒತ್ತಾಯಿಸಿದರು.