ಮಡಿಕೇರಿ, ಸೆ.19 (DaijiworldNews/TA): ಕೊಡಗು ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಕೆಂಗಣ್ಣು (ಕಂಜಕ್ಟಿವೈಟಿಸ್) ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶಾಲಾ ಮಕ್ಕಳು ಸೇರಿದಂತೆ ಹಲವರು ಕಣ್ಣಿನ ಸೋಂಕಿನಿಂದ ಬಳಲುತ್ತಿದ್ದಾರೆ. ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಕೆಂಗಣ್ಣು ಸೋಂಕಿಗೆ ಒಳಗಾದವರಲ್ಲಿ ಕಣ್ಣು ಕೆಂಪಾಗುವುದು, ನಿರಂತರವಾಗಿ ನೀರು ಸುರಿಯುವುದು, ತುರಿಕೆ ಹಾಗೂ ಕಣ್ಣಿನಲ್ಲಿ ಅಂಟಿಕೊಳ್ಳುವಂತಹ ಸಮಸ್ಯೆಗಳು ಪ್ರಮುಖ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳೊಂದಿಗೆ ಹಲವು ಮಂದಿ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಂಜಕ್ಟಿವೈಟಿಸ್ ಕಣ್ಣಿನ ಹೊರಪದರದಲ್ಲಿ ಉಂಟಾಗುವ ಸೋಂಕಾಗಿದೆ. ಸೋಂಕಿತ ವ್ಯಕ್ತಿಯ ಕಣ್ಣು ಅಥವಾ ಅವರು ಬಳಸುವ ವಸ್ತುಗಳ ಸಂಪರ್ಕದಿಂದಲೂ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಶಾಲೆ, ಕಚೇರಿ ಹಾಗೂ ಜನಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ. ಕೆಂಗಣ್ಣು ಕಾಣಿಸಿಕೊಂಡವರು ಪದೇಪದೇ ಕಣ್ಣು ಉಜ್ಜಿಕೊಳ್ಳಬಾರದು. ಕಣ್ಣು ಮುಟ್ಟಿದ ಬಳಿಕ ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಟವೆಲ್, ಕರವಸ್ತ್ರ ಸೇರಿದಂತೆ ವೈಯಕ್ತಿಕ ವಸ್ತುಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಕಣ್ಣಿನಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಮೆಡಿಕಲ್ ಶಾಪ್ಗೆ ತೆರಳಿ ವೈದ್ಯರ ಸಲಹೆಯಿಲ್ಲದೆ ಐ ಡ್ರಾಪ್ಸ್ ಅಥವಾ ಇತರ ಕಣ್ಣಿನ ಔಷಧಿಗಳನ್ನು ಖರೀದಿಸಿ ಬಳಸಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ. ವಿಶೇಷವಾಗಿ ಮಕ್ಕಳಲ್ಲಿ ಕಣ್ಣು ಕೆಂಪಾಗುವುದು, ತುರಿಕೆ, ನೀರು ಸುರಿಯುವುದು ಸೇರಿದಂತೆ ಸೋಂಕಿನ ಲಕ್ಷಣಗಳು ಕಂಡುಬಂದರೆ ಪೋಷಕರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು. ಅಗತ್ಯವಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಕೊಡಗು ಜಿಲ್ಲೆಯಲ್ಲಿ ಕೆಂಗಣ್ಣಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕಪಡುವ ಬದಲು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಂಡು, ಸೋಂಕು ಹರಡುವುದನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯವಾಗಿದೆ.