ಉತ್ತರ ಪ್ರದೇಶ, ಸೆ.19 (DaijiworldNews/AA): ಪ್ರತಿವರ್ಷ ಲಕ್ಷಾಂತರ ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯನ್ನು ಬರೆಯುತ್ತಾರೆ. ಈ ಪೈಕಿ ಅರ್ಹ ಅಭ್ಯರ್ಥಿಗಳಷ್ಟೇ ಉತ್ತೀರ್ಣರಾಗುವಲ್ಲಿ ಸಫಲಾರಗುತ್ತಾರೆ. ಹೀಗೆ 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ 24 ನೇ ರ್ಯಾಂಕ್ ಪಡೆದು ಉತ್ತೀರ್ಣರಾದ ಇಫ್ರಾ ಶಮ್ಸ್ ಅನ್ಸಾರಿ ಅವರ ಯಶೋಗಾಥೆ ಇದು.

ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ರೊಟಹಾ ಗ್ರಾಮದವರಾದ ಇಫ್ರಾ, ಶಿಕ್ಷಣ ಮತ್ತು ಕಠಿಣ ಪರಿಶ್ರಮಕ್ಕೆ ಮಹತ್ವ ನೀಡುವ ಕುಟುಂಬದಲ್ಲಿ ಬೆಳೆದವರು. ಅವರ ತಂದೆ ಶಮ್ಸ್ ಆಲಂ ಅನ್ಸಾರಿ ಕಾರ್ಪೆಟ್ ರಫ್ತು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ತಾಯಿ ಯಾಸ್ಮೀನ್ ಅನ್ಸಾರಿ ಗೃಹಿಣಿ. ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರನಿರುವ ಕುಟುಂಬದಲ್ಲಿ ಇಫ್ರಾ ಎರಡನೇ ಹಿರಿಯ ಪುತ್ರಿಯಾಗಿದ್ದಾರೆ.
ಭದೋಹಿಯಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ ಇಫ್ರಾ ಅವರು ಲಖನೌನ ಲಾ ಮಾರ್ಟಿನಿಯರ್ ಗರ್ಲ್ಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಬಳಿಕ ದೆಹಲಿಯ ಲೇಡಿ ಶ್ರೀರಾಮ್ ಕಾಲೇಜ್ ಫಾರ್ ವುಮೆನ್ನಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು. ನಂತರ ದೆಹಲಿ ವಿಶ್ವವಿದ್ಯಾಲಯದ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಯುಪಿಎಸ್ಸಿ ಪರೀಕ್ಷೆ ಬರೆಯುವುದು ಇಫ್ರಾ ಅವರ ಆರಂಭಿಕ ಗುರಿಯಾಗಿರಲಿಲ್ಲ. ಬಳಿಕ ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧಾರ ಕೈಗೊಂಡ ಅವರು 2023ರ ಮೊದಲ ಪ್ರಯತ್ನದಲ್ಲಿ ಅವರು ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ಎರಡನೇ ಪ್ರಯತ್ನದಲ್ಲಿ ಇನ್ನಷ್ಟು ದೃಢಸಂಕಲ್ಪದಿಂದ ಮರಳಿದ ಅವರು ಪ್ರಿಲಿಮ್ಸ್ ಮತ್ತು ಮೇನ್ಸ್ ಪರೀಕ್ಷೆಗಳನ್ನು ತೇರ್ಗಡೆಗೊಂಡು ಸಂದರ್ಶನ ಹಂತ ತಲುಪಿದರು. ಆದರೆ ಅಂತಿಮ ಆಯ್ಕೆಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. 2025ರಲ್ಲಿ ಮೂರನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಇಫ್ರಾ ಅವರು ಮೂರು ಹಂತಗಳನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿ 24ನೇ ರ್ಯಾಂಕ್ ಗಳಿಸಿದರು. ಈ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಳ್ಳುವಲ್ಲಿ ಸಫಲವಾಗುತ್ತಾರೆ.