ದೆಹಲಿ, ಸೆ.18 (DaijiworldNews/AA): ಅರಬ್ಬೀ ಸಮುದ್ರದಲ್ಲಿ ಪಾಕಿಸ್ತಾನ ನೌಕಾದಳದ ಯುದ್ಧನೌಕೆ ಉಭಯ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಒಪ್ಪಂದ ಹಾಗೂ ಅಂತಾರಾಷ್ಟ್ರೀಯ ನಿಯಮಾವಳಿಗಳನ್ನು ಉಲ್ಲಂಘಿಸಿದೆ ಎಂದು ಭಾರತ ಹೇಳಿದೆ.

ದೆಹಲಿಯಲ್ಲಿಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ಭಾರತದ ಐಎನ್ ಎಸ್ ಕೋಲ್ಕತ ಹಡಗು ತನ್ನ ದೈನಂದಿನ ಗಸ್ತು ಕಾರ್ಯಾಚರಣೆಯಲ್ಲಿದ್ದ ಸಮಯದಲ್ಲಿ ಪಾಕಿಸ್ತಾನ ನೌಕಾದಳದ ಪಿಎನ್ ಎಸ್ ಹುನೈನ್ ಯುದ್ಧನೌಕೆ ಅನುಚಿತ ಧೋರಣೆಯೊಂದಿಗೆ ವ್ಯವಹರಿಸಿದೆ. ಅಪಾಯಕಾರಿ ರೀತಿಯಲ್ಲಿ ಭಾರತದ ನೌಕೆಯ ಸಮೀಪ ಬಂದ ಹಿನ್ನೆಲೆಯಲ್ಲಿ ಅಲ್ಪ ಪ್ರಮಾಣದ ಘರ್ಷಣೆ ಸಂಭವಿಸಿದೆ. ಇಂತಹ ವರ್ತನೆ 1991 ರ ಭಾರತ-ಪಾಕಿಸ್ತಾನ ಒಪ್ಪಂದದ ಉಲ್ಲಂಘನೆಯಾಗಿದೆ" ಎಂದು ತಿಳಿಸಿದರು.
"ಒಪ್ಪಂದದ ಪ್ರಕಾರ, ಉಭಯ ದೇಶದ ನೌಕಾದಳದ ಘಟಕಗಳು ಕನಿಷ್ಠ 3 ನಾಟಿಕಲ್ ಮೈಲು ದೂರದ ಅಂತರ ಕಾಯ್ದುಕೊಳ್ಳಬೇಕು. ಆದರೆ, ಪಾಕಿಸ್ತಾನದ ನೌಕೆ ಅತ್ಯಂತ ಸನಿಹಕ್ಕೆ ಬಂದದ್ದಷ್ಟೇ ಅಲ್ಲದೆ, ಘರ್ಷಣೆಯನ್ನೂ ನಡೆಸಿದೆ. ಈ ಕೃತ್ಯ ಅಂತಾರಾಷ್ಟ್ರೀಯ ನಿಯಮಾವಳಿಗೂ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ಕಾರ್ಯಾಚರಣೆಗಳನ್ನು ಎಚ್ಚರಿಕೆಯಿಂದ ನಡೆಸುವಂತೆ ಹಾಗೂ ಒಪ್ಪಂದಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸುವಂತೆ ಪಾಕಿಸ್ತಾನಕ್ಕೆ ಸೂಚನೆ ನೀಡಲಾಗಿದೆ. ಘಟನೆಯಲ್ಲಿ ಐಎನ್ ಎಸ್ ಕೋಲ್ಕತ ಯುದ್ಧನೌಕೆಗೆ ಪ್ರಮುಖ ಹಾನಿಯಾಗಿಲ್ಲ, ಕಾರ್ಯನಿರ್ವಹಣೆ ಮಾಡುತ್ತಿದೆ" ಎಂದು ಹೇಳಿದರು.