ಶಿವಮೊಗ್ಗ, ಸೆ.17 (DaijiworldNews/AK): ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇದ್ದು ರಾಜ್ಯ ಸರಕಾರವು ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ವಿದ್ಯುತ್, ನೀರು ಇಲ್ಲದೇ ಬೆಳೆ ನಾಶವಾಗುತ್ತಿದೆ. ರೈತರು ಈ ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶಭರಿತರಾಗಿದ್ದಾರೆ ಎಂದ ಅವರು, ನಾವು ಈಚೆಗೆ ಬಳ್ಳಾರಿ ಚಲೋ ಪಾದಯಾತ್ರೆ ನಡೆಸಿದ್ದೇವೆ. ಕುಂಭಕರ್ಣ ನಿದ್ರೆಯಲ್ಲಿದ್ದ ಈ ಸರಕಾರನ್ನು ಬಡಿದೆಬ್ಬಿಸುವ ಕೆಲಸವನ್ನು ಬಿಜೆಪಿ, ಹೋರಾಟದ ಮೂಲಕ ಮಾಡಿದೆ ಎಂದರು.
ರಾಜ್ಯದ ಮುಖ್ಯಮಂತ್ರಿಗಳು ಕೇವಲ ಬೆಂಗಳೂರಿಗೆ ಸೀಮಿತವಾಗಿದ್ದರು. ಈಗ ಸ್ವಲ್ಪ ಜ್ಞಾನೋದಯವಾಗಿ ರಾಜ್ಯದ ಬೇರೆಬೇರೆ ಜಿಲ್ಲೆಗಳಿಗೆ ಪ್ರವಾಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಕರಾವಳಿ ಭಾಗಕ್ಕೆ ಕಾಂಗ್ರೆಸ್ ಸರಕಾರದ ಶೂನ್ಯ ಕೊಡುಗೆ
ಮಂಗಳೂರಿಗೆ ಮುಖ್ಯಮಂತ್ರಿಗಳು ಭೇಟಿ ಕೊಡುತ್ತಿದ್ದಾರೆ. ಕಳೆದ 3 ವರ್ಷಗಳಲ್ಲಿ ಕಾಂಗ್ರೆಸ್ ಸರಕಾರವು ಕರಾವಳಿ ಭಾಗಕ್ಕೆ ಶೂನ್ಯ ಕೊಡುಗೆ ನೀಡಿದೆ. ಒಂದು ಬಿಡಿಗಾಸನ್ನೂ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು. ಹಿಂದೆ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರವು 18ರಿಂದ 20 ಸಾವಿರ ಕೋಟಿ ರೂಪಾಯಿಗಳನ್ನು ಕರಾವಳಿ ಭಾಗದ ಅಭಿವೃದ್ಧಿಗೆ ನೀಡಿತ್ತು ಎಂದು ಗಮನ ಸೆಳೆದರು.
ಪ್ರತಿ ಕ್ಷೇತ್ರಕ್ಕೆ 200 ಕೋಟಿ ವಿಶೇಷ ಅನುದಾನಕ್ಕೆ ಆಗ್ರಹ
ಕೇವಲ ಕ್ಯಾಬಿನೆಟ್ ಸಭೆ ಮಾಡಿ ಫೋಟೊ ಹೊಡೆಸಿಕೊಳ್ಳುವ ಕೆಲಸ ಆಗದಿರಲಿ. ಕರಾವಳಿ ಭಾಗದ ಅಭಿವೃದ್ಧಿಗೆ ಮತ್ತು ರಸ್ತೆ ಅಭಿವೃದ್ಧಿಗಾಗಿ ವಿಶೇಷ ಅನುದಾನ ಕೊಡಿ ಎಂದು ಒತ್ತಾಯಿಸಿದರು. ರಸ್ತೆ ಅಭಿವೃದ್ಧಿಗಾಗಿ ಎಲ್ಲ 224 ಕ್ಷೇತ್ರಗಳಿಗೆ 200 ಕೋಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಕಸ್ತೂರಿರಂಗನ್ ವರದಿ ನಿಮ್ಮದೇ ಯುಪಿಎ ಸರಕಾರದ ಕೊಡುಗೆ
ಕಸ್ತೂರಿರಂಗನ್ ವರದಿ ಬಗ್ಗೆ ಸಂವಾದಕ್ಕೆ ಮುಖ್ಯಮಂತ್ರಿಗಳು ಬರಲಿದ್ದಾರೆ. ಕಸ್ತೂರಿರಂಗನ್ ವರದಿ ನಿಮ್ಮದೇ ಯುಪಿಎ ಸರಕಾರದ ಕೊಡುಗೆ. ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಗಾಡ್ಗೀಳ್ ವರದಿ, ಕಸ್ತೂರಿರಂಗನ್ ವರದಿ ಪಡೆದಿದ್ದಾರೆ. ಕಾಡಂಚಿನ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಇದರಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಲಜ್ಜೆಗೆಟ್ಟ ರಾಜಕಾರಣ ಮಾಡುವುದು ಬಿಡಿ; ಕಾಡಂಚಿನ ರೈತರ ರಕ್ಷಣೆ ಮಾಡಿ. ಸದನದಲ್ಲಿ ಸಮರ್ಪಕ ಚರ್ಚೆ ಮಾಡೋಣ. ಕಪಟ ನಾಟಕ ಬೇಡ; ಜನರ ದಿಕ್ಕು ತಪ್ಪಿಸದಿರಿ ಎಂದು ಎಚ್ಚರಿಸಿದರು.