ಮಹಾರಾಷ್ಟ್ರ, ಸೆ.18 (DaijiworldNews/AK): ಕಲಿಯೋಕೆ ವಯಸ್ಸಿನ ಹಂಗಿಲ್ಲ ಅಂತಾರಲ್ಲ, ಅದು ನಿಜ. ಆದರೆ ಕೆಲವರ ಜೀವನ ನೋಡಿದರೆ ಕಲಿಯೋದೇ ಒಂದು ಹುಚ್ಚು, ಒಂದು ಹವ್ಯಾಸ ಅನ್ನಿಸಿಬಿಡುತ್ತೆ. ಅಂಥವರ ಸಾಲಿನಲ್ಲಿ ಮೊದಲು ನಿಲ್ಲುವವರೇ ಡಾ. ಶ್ರೀಕಾಂತ್ ಜಿಚ್ಕರ್. ಇವರ ಕಥೆ ಸ್ಪೂರ್ತಿದಾಯಕ ಕಥೆ ಇಲ್ಲಿದೆ.

1954ರಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದ ಶ್ರೀಕಾಂತ್ ಜಿಚ್ಕರ್ ಅವರ ಶೈಕ್ಷಣಿಕ ಪಯಣ ಶುರುವಾಗಿದ್ದೇ ವೈದ್ಯಕೀಯ ಪದವಿಯಿಂದ MBBS ಮುಗಿಸಿ, MD ಕೂಡ ಪೂರ್ಣಗೊಳಿಸಿದರು . 1973 ರಿಂದ 1990ರ ನಡುವೆ, ಅವರು ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ಇಂಗ್ಲಿಷ್ ಸಾಹಿತ್ಯ, ತತ್ವಶಾಸ್ತ್ರ, ರಾಜ್ಯಶಾಸ್ತ್ರ, ಪ್ರಾಚೀನ ಭಾರತೀಯ ಇತಿಹಾಸ, ಮನೋವಿಜ್ಞಾನ... ಹೀಗೆ ಬರೋಬ್ಬರಿ 20 ಪದವಿಗಳನ್ನು ತಮ್ಮದಾಗಿಸಿಕೊಂಡರು.
ಇವುಗಳಲ್ಲಿ ಹೆಚ್ಚಿನವು ಸ್ನಾತಕೋತ್ತರ ಪದವಿಗಳಾಗಿದ್ದು, ಅನೇಕ ವಿಷಯಗಳಲ್ಲಿ ಚಿನ್ನದ ಪದಕವನ್ನೂ ಪಡೆದಿದ್ದರು. ಅಷ್ಟೇ ಅಲ್ಲ, ಅಂತರರಾಷ್ಟ್ರೀಯ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ, ಪತ್ರಿಕೋದ್ಯಮದಲ್ಲಿ ಪದವಿ, ಮತ್ತು ಸಂಸ್ಕೃತದಲ್ಲಿ ಡಾಕ್ಟರೇಟ್ (ಡಿ.ಲಿಟ್) ಕೂಡ ಪಡೆದಿದ್ದರು. ಇದಕ್ಕೇ ಅವರನ್ನು 'ಭಾರತದ ಅತ್ಯಂತ ವಿದ್ಯಾವಂತ ವ್ಯಕ್ತಿ' ಅಂತ ಕರೆಯಲಾಗುತ್ತಿತ್ತು.
ವೈದ್ಯರಾಗಿ ಕೆಲಸ ಮಾಡುತ್ತಿರುವಾಗಲೇ, 1978ರಲ್ಲಿ ದೇಶದ ಅತ್ಯಂತ ಕಠಿಣ ಪರೀಕ್ಷೆಯಾದ UPSC ಬರೆದು ಮೊದಲ ಪ್ರಯತ್ನದಲ್ಲೇ ಪಾಸಾಗಿ IPS ಅಧಿಕಾರಿಯಾದರು. ಎರಡೇ ವರ್ಷದಲ್ಲಿ ಆ ಕೆಲಸಕ್ಕೆ ಗುಡ್ಬೈ ಹೇಳಿ ಮತ್ತೆ ಪರೀಕ್ಷೆ ಬರೆದು IAS ಅಧಿಕಾರಿಯಾದರು.
IAS ಕೆಲಸ ಬಿಟ್ಟ ಅದೇ ವರ್ಷ ಮಹಾರಾಷ್ಟ್ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. ಆಗ ಅವರಿಗೆ ಕೇವಲ 26 ವರ್ಷ ಆಗಿತ್ತು. ಅತಿ ಕಿರಿಯ ವಯಸ್ಸಿನಲ್ಲಿ ಶಾಸಕರಾದ ದಾಖಲೆ ಬರೆದರು. ಮುಂದೆ ವಿಧಾನ ಪರಿಷತ್ ಸದಸ್ಯರಾಗಿ, ರಾಜ್ಯ ಸಚಿವರಾಗಿ, ರಾಜ್ಯಸಭಾ ಸಂಸದರಾಗಿಯೂ ಸೇವೆ ಸಲ್ಲಿಸಿದರು. ಒಂದು ಹಂತದಲ್ಲಿ, ಮಹಾರಾಷ್ಟ್ರ ಸರ್ಕಾರದಲ್ಲಿ 14 ಖಾತೆಗಳನ್ನು ಏಕಕಾಲಕ್ಕೆ ನಿಭಾಯಿಸಿದ ಸಮರ್ಥ ಸಚಿವರೆನಿಸಿಕೊಂಡಿದ್ದರು.
ಬಳಿಕ 1998 ಮತ್ತು 2004ರ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರು. ಅದೇ ವರ್ಷ, ಜೂನ್ 2, 2004 ರಂದು, ನಾಗ್ಪುರದ ಬಳಿ ನಡೆದ ಭೀಕರ ಕಾರು ಅಪಘಾತದಲ್ಲಿ ಶ್ರೀಕಾಂತ್ ಜಿಚ್ಕರ್ ಅವರು ದುರಂತವಾಗಿ ಸಾವನ್ನಪ್ಪಿದರು. ಆಗ ಅವರಿಗೆ ಕೇವಲ 49 ವರ್ಷ.
ಶ್ರೀಕಾಂತ್ ಜಿಚ್ಕರ್ ಅವರು ಜ್ಞಾನ ಮತ್ತು ಸಾಧನೆಗೆ ಎಲ್ಲೆಗಳಿಲ್ಲ ಎಂಬುದನ್ನು ಅವರು ತೋರಿಸಿದರು. ಅವರ ಅಕಾಲಿಕ ಮರಣದಿಂದ ದೇಶ ಒಂದು ಅಪಾರ ಪ್ರತಿಭೆಯನ್ನು ಕಳೆದುಕೊಂಡಿತು. ಅವರ ಕಥೆ ಇಂದಿಗೂ ಅನೇಕರಿಗೆ ಸ್ಫೂರ್ತಿಯಾಗಿದೆ.