ನವದೆಹಲಿ, ಸೆ.15 (DaijiworldNews/AK): ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಹಾಗೂ ಜಾಗತಿಕ ಭಯೋತ್ಪಾದಕ ಮಸೂದ್ ಅಜರ್ ಬಂಧನಕ್ಕೆ ನೆರವಾಗುವ ಸುಳಿವು ನೀಡಿದವರಿಗೆ ನೀಡುವ ಬಹುಮಾನವನ್ನು 70 ಲಕ್ಷಕ್ಕೆ ಹೆಚ್ಚಿಸಿರುವ ಪಾಕಿಸ್ತಾನದ ನಿರ್ಧಾರವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಟೀಕಿಸಿದೆ.

ಇದು “ಜಗತ್ತಿನ ಕಣ್ಣಿಗೆ ಮಣ್ಣೆರಚುವ ಡೋಂಗಿ ತಂತ್ರ” ಎಂದು ಭಾರತ ಆಕ್ರೋಶ ವ್ಯಕ್ತಪಡಿಸಿದ್ದು, ಪಾಕಿಸ್ತಾನದಲ್ಲೇ ಆಶ್ರಯ ಪಡೆದಿರುವ ಉಗ್ರನ ವಿರುದ್ಧ ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಭಾರತ ಎಚ್ಚರಿಕೆ ನೀಡಿದೆ.
ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಬಿಡುಗಡೆ ಮಾಡಿರುವ 2026ರ ಅತ್ಯಂತ ಪ್ರಭಾವಿ ಉಗ್ರರ ಪಟ್ಟಿಯಲ್ಲಿ ಅಜರ್ ಹೆಸರನ್ನು ಸೇರಿಸಲಾಗಿದ್ದು, ಆತನನ್ನು ಹಿಡಿದುಕೊಟ್ಟವರಿಗೆ ನೀಡುವ ಬಹುಮಾನವನ್ನು 20 ಲಕ್ಷ ಪಿಕೆಆರ್ನಿಂದ 70 ಲಕ್ಷ ಪಿಕೆಆರ್ ಗೆ ಏರಿಸಲಾಗಿದೆ.
ಇಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಜನರನ್ನು ವಂಚಿಸುವ ಮತ್ತು ಕಣ್ಣಿಗೆ ಮಣ್ಣೆರಚುವ ಪಾಕಿಸ್ತಾನದ ಇಂತಹ ನಾಟಕಗಳು ಹೊಸದೇನಲ್ಲ. ಭಯೋತ್ಪಾದನೆಯನ್ನು ಪೋಷಿಸುವ ರಾಷ್ಟ್ರವೊಂದು ಮಾಡುವ ಇಂತಹ ಪ್ರಕಟಣೆಗಳು ಎಷ್ಟು ಸುಳ್ಳು ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಪಾಕಿಸ್ತಾನವು ಯಾವುದೇ ಪ್ರಯೋಜನವಿಲ್ಲದ ಇಂತಹ ಗಿಮಿಕ್ಗಳನ್ನು ಮಾಡುವ ಬದಲು ನಿಜವಾದ ಕ್ರಮ ಕೈಗೊಳ್ಳಲಿ” ಎಂದು ಕಿಡಿ ಕಾರಿದ್ದಾರೆ.
ಮಸೂದ್ ಅಜರ್ ಭಾರತಕ್ಕೆ ಅತ್ಯಂತ ಅಗತ್ಯವಿರುವ ಪ್ರಮುಖ ಅಪರಾಧಿಯಾಗಿದ್ದು, 2001ರ ಭಾರತೀಯ ಸಂಸತ್ ದಾಳಿ, 2008ರ ಮುಂಬೈ ದಾಳಿ, 2016ರ ಪಠಾಣ್ಕೋಟ್ ವಾಯುನೆಲೆ ದಾಳಿ ಮತ್ತು 40 ಸಿಆರ್ಪಿಎಫ್ ಯೋಧರನ್ನು ಬಲಿಪಡೆದ 2019ರ ಪುಲ್ವಾಮಾ ದಾಳಿಯ ಮಾಸ್ಟರ್ಮೈಂಡ್ ಆಗಿದ್ದಾನೆ. 1999ರಲ್ಲಿ ಇಂಡಿಯನ್ ಏರ್ಲೈನ್ಸ್ನ ‘IC-814’ ವಿಮಾನವನ್ನು ಉಗ್ರರು ಅಪಹರಿಸಿದ್ದಾಗ, ಪ್ರಯಾಣಿಕರ ಪ್ರಾಣ ರಕ್ಷಣೆಗಾಗಿ ಭಾರತ ಸರ್ಕಾರವು ಮಸೂದ್ ಅಜರ್ನನ್ನು ಜೈಲಿನಿಂದ ಬಿಡುಗಡೆ ಮಾಡಬೇಕಾಯಿತು. ನಂತರ ಈತ ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿದ್ದಾನೆ.