ನವದೆಹಲಿ, ಸೆ.15 (DaijiworldNews/AK): ನವದೆಹಲಿಯಲ್ಲಿ ನಡೆದ ಬ್ರಿಕ್ಸ್ (BRICS) ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವೆ ನಡೆದ ದ್ವಿಪಕ್ಷೀಯ ಸಭೆಯಲ್ಲಿ, ಭಾರತ-ಚೀನಾ ಬಾಂಧವ್ಯಕ್ಕೆ 3 ಪರಸ್ಪರ ಸೂತ್ರಗಳೇ ದಿಕ್ಸೂಚಿಯಾಗಬೇಕು ಎಂದು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಭಾರತದ ಭದ್ರತಾ ಕಾಳಜಿಗಳನ್ನು ಪ್ರತಿಪಾದಿಸಿದ್ದು, ಉಭಯ ದೇಶಗಳು ಪರಸ್ಪರ ಗೌರವ, ಪರಸ್ಪರ ಹಿತಾಸಕ್ತಿ ಮತ್ತು ಪರಸ್ಪರ ಸೂಕ್ಷ್ಮತೆ ಎಂಬ 3 ತತ್ವಗಳಿಗೆ ಬದ್ಧವಾಗಿರಬೇಕು ಎಂದು ಚೀನಾಗೆ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಭಾರತ-ಚೀನಾ ಸಂಬಂಧವನ್ನು ಕೇವಲ ಪ್ರಸ್ತುತ ಸನ್ನಿವೇಶಕ್ಕೆ ಸೀಮಿತಗೊಳಿಸದೆ, ಕಾರ್ಯತಂತ್ರ ಹಾಗೂ ದೀರ್ಘಕಾಲೀನ ದೃಷ್ಟಿಕೋನದಿಂದ ನೋಡಲಾಗುವುದು. ಉಭಯ ದೇಶಗಳ ನಡುವಿನ ಭಿನ್ನಾಪ್ರಾಯಗಳು ಯಾವುದೇ ಕಾರಣಕ್ಕೂ ವಿವಾದಗಳಾಗಿ ರೂಪಾಂತರಗೊಳ್ಳಲು ಬಿಡುವುದಿಲ್ಲ. ಗಡಿ ವಿವಾದಕ್ಕೆ ಎರಡೂ ದೇಶಗಳಿಗೆ ಸಮ್ಮತವಾಗುವಂತಹ ನ್ಯಾಯಯುತ ಹಾಗೂ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲಾಗುವುದು. ದ್ವಿಪಕ್ಷೀಯ ವಾಣಿಜ್ಯ ಹಾಗೂ ಸಾಂಸ್ಕೃತಿಕ ವಿನಿಮಯವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಈ ವೇಳೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.