ಬೆಂಗಳೂರು, ಸೆ.15 (DaijiworldNews/AK): ನರೇಂದ್ರ ಮೋದಿ ಜೀ ಅವರು ದೇಶದ ರಾಜಕೀಯ ಸಂಸ್ಕಂತಿಯನ್ನು ಬದಲಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷ ಒಡೆದಾಳುವ ನೀತಿ ಪಾಲಿಸುತ್ತಿದೆ. ಓಲೈಕೆ ರಾಜಕಾರಣ ಮಾಡಿಕೊಂಡಿದೆ. ಭ್ರಷ್ಟಾಚಾರದಲ್ಲೇ ಮುಳುಗಿದೆ. ಇದನ್ನು ತೊಲಗಿಸಲು ನಾವು ಮುಂದಾಗಿದ್ದೇವೆ ಎಂದು ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರು ಹೇಳಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಐ) ಮತ್ತು ಆಯುಷ್ಮನ್ ಭಾರತ್ ಯೋಜನೆಯಡಿಯಲ್ಲಿ ಕೋಟ್ಯಂತರ ಜನರಿಗೆ ಆರೋಗ್ಯ ಸೇವೆ ಒದಗಿಸಲಾಗಿದೆ. ಇದು ವಿಶ್ವದ ಅತಿದೊಡ್ಡ ಆರೋಗ್ಯ ಸೇವೆ ಎಂದು ಹೆಸರು ಪಡೆದಿದೆ. 75 ವರ್ಷ ಮೀರಿದ ಎಲ್ಲಾ ಜನರಿಗೆ ಐದು ಲಕ್ಷ ರೂ. ವರೆಗೆ ಆರೋಗ್ಯ ಸೌಲಭ್ಯ ಸಿಗುತ್ತಿದೆ. ದೇಶದಲ್ಲಿ ವೈದ್ಯಕೀಯ ಸೀಟುಗಳು, ಸ್ನಾತಕೋತ್ತರ ಸೀಟುಗಳು, ವೈದ್ಯಕೀಯ ಕಾಲೇಜುಗಳು ಹೆಚ್ಚಳವಾಗಿವೆ. ಇತ್ತೀಚೆಗೆ ಹೆಣ್ಣು ಮಕ್ಕಳಿಗೆ ಎಚ್ಪಿವಿ ಲಸಿಕೆ ನೀಡಲು ಆರಂಭಿಸಿದ್ದೇವೆ ಎಂದು ವಿವರಿಸಿದರು.
ಮೋದಿಯವರ ಗ್ಯಾನ್ ಮಂತ್ರ.
ಪ್ರಧಾನಿ ಮೋದಿ ಅವರು ಗ್ಯಾನ್ (ಜಿವೈಎಎನ್) ಮಂತ್ರವನ್ನು ನೀಡಿದ್ದಾರೆ. ಗ್ಯಾನ್ ಎಂದರೆ ಜಿ- ಬಡವರು, ವೈ-ಯುವಕರು, ಎ-ಅನ್ನದಾತರು ಮತ್ತು ಎನ್-ನಾರೀಶಕ್ತಿ ಎಂಬುದಾಗಿದೆ. ಬಡತನ ನಿವಾರಣೆಗೆ ಕ್ರಮ ವಹಿಸಲಾಗಿದೆ. ಯುವಕರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಅನ್ನದಾತರಿಗೆ ಶಕ್ತಿ ನೀಡಲಾಗಿದೆ. ನಾರೀಶಕ್ತಿ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.