ನವದೆಹಲಿ, ಸೆ.15 (DaijiworldNews/TA): ದುಬೈಗೆ ತೆರಳಬೇಕಿದ್ದ ಸ್ಪೈಸ್ಜೆಟ್ನ ಎರಡು ವಿಮಾನಗಳು ಪದೇಪದೇ ವಿಳಂಬವಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ 200ಕ್ಕೂ ಹೆಚ್ಚು ಪ್ರಯಾಣಿಕರು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ದೆಹಲಿಯಿಂದ ದುಬೈಗೆ ತೆರಳಬೇಕಿದ್ದ ಎಸ್ಜಿ 5111 ಮತ್ತು ಎಸ್ಜಿ 5105 ವಿಮಾನಗಳು ಸೋಮವಾರ ಬೆಳಗ್ಗೆ ಮತ್ತು ಸಂಜೆ ನಿರ್ಗಮಿಸಬೇಕಿತ್ತು. ಆದರೆ, ಎರಡೂ ವಿಮಾನಗಳ ಹಾರಾಟದ ಸಮಯವನ್ನು ಪದೇಪದೇ ಮುಂದೂಡಲಾಗಿತ್ತು. ಇದರಿಂದ ನೂರಾರು ಪ್ರಯಾಣಿಕರು ಗಂಟೆಗಟ್ಟಲೆ ವಿಮಾನ ನಿಲ್ದಾಣದಲ್ಲೇ ಕಾಯುವಂತಾಯಿತು.
ದುಬೈಗೆ ತೆರಳಬೇಕಿದ್ದ ಪ್ರಯಾಣಿಕರು ನಿಗದಿತ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ತಾಂತ್ರಿಕ ದೋಷ ಮತ್ತು ಕಾರ್ಯಾಚರಣೆಯ ಕಾರಣಗಳನ್ನು ನೀಡಿ ವಿಮಾನಗಳ ನಿರ್ಗಮನ ಸಮಯವನ್ನು ಪದೇಪದೇ ಮುಂದೂಡಲಾಗಿದೆ ಎಂದು ವರದಿಯಾಗಿದೆ.
ವಿಮಾನ ವಿಳಂಬದಿಂದಾಗಿ ಹಲವು ಪ್ರಯಾಣಿಕರು ರಾತ್ರಿಯಿಡೀ ಟರ್ಮಿನಲ್ನಲ್ಲೇ ಕಳೆಯಬೇಕಾಯಿತು. ವಿಶೇಷವಾಗಿ ಚಿಕ್ಕ ಮಕ್ಕಳು ಮತ್ತು ಹಿರಿಯ ನಾಗರಿಕರು ಆಹಾರ, ನೀರು ಹಾಗೂ ವಿಶ್ರಾಂತಿ ವ್ಯವಸ್ಥೆಯ ಕೊರತೆಯಿಂದ ತೀವ್ರ ತೊಂದರೆ ಅನುಭವಿಸಿದರು. ವಿಮಾನಗಳ ಹಾರಾಟ ಯಾವಾಗ ನಡೆಯಲಿದೆ ಎಂಬುದರ ಕುರಿತು ಸ್ಪೈಸ್ಜೆಟ್ ಆಡಳಿತ ಮಂಡಳಿ ಅಥವಾ ಗ್ರೌಂಡ್ ಸಿಬ್ಬಂದಿಯಿಂದ ಸ್ಪಷ್ಟ ಮಾಹಿತಿ ದೊರೆಯಲಿಲ್ಲ ಎನ್ನಲಾಗಿದೆ. ಇದರಿಂದ ಪ್ರಯಾಣಿಕರ ಆಕ್ರೋಶ ಮತ್ತಷ್ಟು ಹೆಚ್ಚಾಯಿತು.
ಪದೇಪದೇ ವಿಳಂಬದಿಂದ ಬೇಸತ್ತ ಪ್ರಯಾಣಿಕರು ಸೋಮವಾರ ಸಂಜೆ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್-3ರಲ್ಲಿ ಸ್ಪೈಸ್ಜೆಟ್ ವಿರುದ್ಧ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ವಿಮಾನ ವಿಳಂಬಕ್ಕೆ ಸೂಕ್ತ ಕಾರಣ ಹಾಗೂ ಪ್ರಯಾಣಿಕರಿಗೆ ಸ್ಪಷ್ಟ ಮಾಹಿತಿ ನೀಡುವಂತೆ ಸ್ಪೈಸ್ಜೆಟ್ ಅಧಿಕಾರಿಗಳಿಗೆ ಸೂಚಿಸಿದರು.
ಘಟನೆ ಕುರಿತು ಸ್ಪೈಸ್ಜೆಟ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಕ್ಷಮೆಯಾಚಿಸಿದೆ. ವಿಮಾನವೊಂದರಲ್ಲಿ ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯಲ್ಲಿ ಅಡಚಣೆ ಉಂಟಾಗಿದ್ದು, ಇದರ ಪರಿಣಾಮ ದೆಹಲಿ-ದುಬೈ ವಿಮಾನಗಳ ಹಾರಾಟ ವಿಳಂಬವಾಗಿದೆ ಎಂದು ಏರ್ಲೈನ್ಸ್ ತಿಳಿಸಿದೆ.
ತೊಂದರೆಗೆ ಒಳಗಾದ ಪ್ರಯಾಣಿಕರಿಗೆ ಪರ್ಯಾಯ ವಿಮಾನಗಳ ವ್ಯವಸ್ಥೆ ಮಾಡಲಾಗುತ್ತಿದ್ದು, ಅವರ ಅನಾನುಕೂಲತೆಯನ್ನು ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಆರ್ಥಿಕ ಹಾಗೂ ಕಾರ್ಯಾಚರಣೆಯ ಸವಾಲುಗಳನ್ನು ಎದುರಿಸುತ್ತಿರುವ ಸ್ಪೈಸ್ಜೆಟ್ನಲ್ಲಿ ಇಂತಹ ವಿಮಾನ ವಿಳಂಬಗಳ ಘಟನೆಗಳು ಪ್ರಯಾಣಿಕರ ಸೇವೆಯ ಗುಣಮಟ್ಟದ ಕುರಿತು ಮತ್ತಷ್ಟು ಕಳವಳಕ್ಕೆ ಕಾರಣವಾಗಿವೆ.