ಬೆಂಗಳೂರು, ಸೆ.15 (DaijiworldNews/AA): ಯಾವ ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ವ್ಯವಸ್ಥೆ ಇದೆ. ಯಾವ ದೇಶದಲ್ಲಿ ಮಾನವತ್ವದ ಹಕ್ಕುಗಳಿಗೆ ಬೆಲೆ ಇದೆ. ಯಾವ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯವಿದೆ. ಯಾವ ದೇಶದ ಆಡಳಿತದಲ್ಲಿ ಜನಸಮುದಾಯದ ಭಾಗವಹಿಸುವಿಕೆ ಇದೆ ಮತ್ತು ಯಾವ ದೇಶದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಇದೆಯೋ, ಆ ದೇಶಗಳಲ್ಲಿ ಮಾತ್ರ ಇಂದು ಶಾಂತಿಯುತ ವಾತಾವರಣವಿದೆ. ಅದನ್ನೇ ನಾವು ಪ್ರಜಾಪ್ರಭುತ್ವ ಎಂದು ಕರೆಯುತ್ತೇವೆ ಎಂದು ಡಿಸಿಎಂ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಪ್ರಪಂಚದಲ್ಲಿ 90 ಪ್ರಜಾಪ್ರಭುತ್ವದ ದೇಶಗಳಿವೆ. ಇನ್ನುಳಿದ ದೇಶಗಳಲ್ಲಿ ನಡೆಯುವಂತಹ ವಿದ್ಯಮಾನಗಳೇ ಬೇರೆ, ಆಡಳಿತವೇ ಬೇರೆ. ನಮ್ಮ ನೆರೆಯ ದೇಶಗಳಾದ ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳಗಳಲ್ಲಿ ಏನೇನು ನಡೆಯಿತು ಎಂಬುದನ್ನು ಗಮನಿಸಿದ್ದೇವೆ. ಆದರೆ, ನಮ್ಮ ದೇಶದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಹಾಕಿಕೊಟ್ಟಿರುವ ಅಡಿಪಾಯ ಭದ್ರವಾಗಿರುವುದರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವಂತಹ ಬೆಳವಣಿಗೆಗೆ ಗೆಲುವು ಸಿಕ್ಕಿಲ್ಲ" ಎಂದರು.
"ದೇಶದ ಜನಸಂಖ್ಯೆಯಲ್ಲಿ ಶೇ. 65ರಷ್ಟು ಯುವ ಸಮುದಾಯವಿದೆ. 16-35 ವಯೋಮಾನದ ಸಮುದಾಯವಿದು. ಇವರು ಮುಂದಿನ ಭವಿಷ್ಯವನ್ನು ನಿರ್ಮಿಸುವವರು. ಈಗ ಜೆನ್-ಝೀ ಮುನ್ನೆಲೆಗೆ ಬಂದಿದೆ. ಇವರಿಗೆ ನಾವು ಪ್ರಾಮುಖ್ಯತೆ ನೀಡಬೇಕಿದೆ. ಉತ್ತಮ ರಾಜಕೀಯ ವ್ಯವಸ್ಥೆಯನ್ನು ಅವರಿಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ, ಅವರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಧಾರೆಯೆರೆಯಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಸಾಕಷ್ಟು ಕೆಲಸಗಳನ್ನು ನಿರಂತರವಾಗಿ ನಡೆಸುತ್ತ ಬಂದಿದೆ. ಪ್ರತಿಯೊಂದು ಶಾಲಾ-ಕಾಲೇಜುಗಳಿಗೆ, ಮನೆಗಳಿಗೆ ಸಂವಿಧಾನದ ಪೀಠಿಕೆಯನ್ನು ತಲುಪಿಸಿದ್ದೇವೆ. ನಿರಂತರವಾಗಿ ಸಂವಿಧಾನದ ಪೀಠಿಕೆಯನ್ನು ಮನನ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಪ್ರಾಮುಖ್ಯತೆಯನ್ನು ಅರ್ಥೈಸಿಕೊಳ್ಳುವಂತೆ ಮಾಡುತ್ತಿದ್ದೇವೆ" ಎಂದು ಹೇಳಿದರು.