ರಾಜೌರಿ, ಸೆ.15 (DaijiworldNews/TA): ಜಮ್ಮು ಮತ್ತು ಕಾಶ್ಮೀರದ ಪಿರ್ ಪಂಜಾಲ್ ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದ ಜಾಲವೊಂದನ್ನು ಪೊಲೀಸರು ಭೇದಿಸಿದ್ದು, ಲಷ್ಕರ್-ಎ-ತೈಬಾ ಬೆಂಬಲಿತ ಓವರ್ ಗ್ರೌಂಡ್ ವರ್ಕರ್ ಮಾಡ್ಯೂಲ್ನ ಮೂವರು ಪ್ರಮುಖ ಸಹಾಯಕರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕೋಟ್ಚಾರ್ವಾಲ್ ಟೆರಿಯಾತ್ ನಿವಾಸಿಗಳಾದ ಜಾಕಿರ್ ಹುಸೇನ್ ಮತ್ತು ಮೊಹಮ್ಮದ್ ಅಜಮ್, ಹಾಗೂ ಉಧಾನ್ ರಾಜೌರಿಯ ಮೊಹಮ್ಮದ್ ಮುಷ್ತಾಕ್ ಎಂದು ಗುರುತಿಸಲಾಗಿದೆ. ಭಯೋತ್ಪಾದಕರಿಗೆ ನುಸುಳಲು ನೆರವು ನೀಡುತ್ತಿದ್ದ ಬೆಂಬಲ ಜಾಲದ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಈ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಗಳು ಭಯೋತ್ಪಾದಕ ಜಾಲದೊಂದಿಗೆ ಆಳವಾಗಿ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಪಾಕಿಸ್ತಾನಿ ಭಯೋತ್ಪಾದಕರಿಗೆ ಲಾಜಿಸ್ಟಿಕ್ಸ್, ಸುರಕ್ಷಿತ ಆಶ್ರಯ ಹಾಗೂ ಸಾರಿಗೆ ಮಾರ್ಗಗಳನ್ನು ಒದಗಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಇದಲ್ಲದೆ, ಕಾಶ್ಮೀರ ಕಣಿವೆಯತ್ತ ಸಾಗುವ ದುರ್ಗಮ ಪರ್ವತ ಮಾರ್ಗಗಳಲ್ಲಿ ಭಯೋತ್ಪಾದಕ ಗುಂಪುಗಳಿಗೆ ದಾರಿ ತೋರಿಸುವ ಮಾರ್ಗದರ್ಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ನಾಗರಿಕರ ಮೇಲಿನ ದಾಳಿ ಸೇರಿದಂತೆ ಹಲವು ಪ್ರಮುಖ ಭಯೋತ್ಪಾದಕ ಕೃತ್ಯಗಳಿಗೆ ಇವರಿಂದ ಲಾಜಿಸ್ಟಿಕ್ ಬೆಂಬಲ ದೊರೆತಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಬಂಧಿತರಲ್ಲಿ ಒಬ್ಬ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಸುಧಾರಿತ ಸ್ಫೋಟಕ ಸಾಧನವೊಂದನ್ನು ವಶಪಡಿಸಿಕೊಂಡಿದ್ದಾರೆ. ಭಯೋತ್ಪಾದಕರು ಸುರಕ್ಷಿತವಾಗಿ ಇರಿಸುವಂತೆ ಹಸ್ತಾಂತರಿಸಿದ್ದ ಎನ್ನಲಾದ ಈ IED ಅನ್ನು ಪ್ರದೇಶದಲ್ಲಿ ಭೀತಿ ಸೃಷ್ಟಿಸುವ ದಾಳಿಗೆ ಬಳಸಲು ಉದ್ದೇಶಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರ ಬಂಧನದೊಂದಿಗೆ ಗಡಿಯಾಚೆಗಿನ ಭಯೋತ್ಪಾದಕ ಜಾಲದ ಪ್ರಮುಖ ಸಂಪರ್ಕವೊಂದು ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರ ವಿಚಾರಣೆ ಮುಂದುವರಿದಿದ್ದು, ಇನ್ನಷ್ಟು ಸಹಚರರು ಹಾಗೂ ಸ್ಲೀಪರ್ ಸೆಲ್ಗಳ ಮಾಹಿತಿ ಹೊರಬರುವ ಸಾಧ್ಯತೆಯಿದೆ. ಮಾಡ್ಯೂಲ್ನ ಸಂಪರ್ಕಗಳು ಹಾಗೂ ಅದರ ಹಿಂದಿರುವ ಜಾಲವನ್ನು ಪತ್ತೆಹಚ್ಚಲು ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.