ನವದೆಹಲಿ, ಸೆ.15 (DaijiworldNews/TA): ಜಾಗತಿಕ ತಾಪಮಾನ ಏರಿಕೆಯ ಪರಿಣಾಮ ಹಿಮಾಲಯದ ಹಿಮನದಿಗಳು ಆತಂಕಕಾರಿ ವೇಗದಲ್ಲಿ ಕರಗುತ್ತಿದ್ದು, ಇದು ಭಾರತ ಸೇರಿದಂತೆ ಏಷ್ಯಾದ ಹಲವು ರಾಷ್ಟ್ರಗಳಿಗೆ ಭವಿಷ್ಯದ ಜಲ ಬಿಕ್ಕಟ್ಟಿನ ಎಚ್ಚರಿಕೆಯ ಗಂಟೆಯಾಗಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ, 2010ರ ಬಳಿಕ ಹಿಮಾಲಯದಲ್ಲಿ ಹಿಮ ಕರಗುವಿಕೆಯ ಪ್ರಮಾಣ ಹಿಂದಿನ ಅವಧಿಗೆ ಹೋಲಿಸಿದರೆ ಶೇ.65ರಷ್ಟು ಹೆಚ್ಚಾಗಿದೆ.

ವಿಜ್ಞಾನಿಗಳ ಪ್ರಕಾರ, ಈ ವೇಗದ ಕರಗುವಿಕೆಗೆ ಜಾಗತಿಕ ತಾಪಮಾನ ಏರಿಕೆಯ ಜತೆಗೆ ‘ಕಪ್ಪು ಇಂಗಾಲ’ ಪ್ರಮುಖ ಕಾರಣವಾಗಿದೆ. ವಾಯುಮಾಲಿನ್ಯದಿಂದ ಉತ್ಪತ್ತಿಯಾಗುವ ಈ ಕಪ್ಪು ಕಣಗಳು ಹಿಮನದಿಗಳ ಮೇಲೆ ಶೇಖರಣೆಯಾಗುತ್ತಿದ್ದು, ಸೂರ್ಯನ ಶಾಖವನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಂಡು ಹಿಮ ಕರಗುವಿಕೆಯನ್ನು ಮತ್ತಷ್ಟು ವೇಗಗೊಳಿಸುತ್ತಿವೆ. ಭಾರತದ ಒಟ್ಟು ಭೂಭಾಗದಲ್ಲಿ ಹಿಮಾಲಯ ಪ್ರದೇಶದ ಪಾಲು ಸುಮಾರು ಶೇ.18ರಷ್ಟಿದ್ದರೂ, ದೇಶದ ನೈಸರ್ಗಿಕ ಸಂಪನ್ಮೂಲ ಹಾಗೂ ಜಲ ಭದ್ರತೆಯಲ್ಲಿ ಈ ಪ್ರದೇಶದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಗಂಗಾ, ಯಮುನಾ, ಸಿಂಧೂ ಮತ್ತು ಬ್ರಹ್ಮಪುತ್ರ ಸೇರಿದಂತೆ ಹಲವು ಪ್ರಮುಖ ನದಿಗಳು ಹಿಮಾಲಯದ ಹಿಮನದಿಗಳ ಮೇಲೆ ಅವಲಂಬಿತವಾಗಿವೆ.
ಹಿಮನದಿಗಳು ಸದ್ಯ ವೇಗವಾಗಿ ಕರಗುತ್ತಿರುವುದರಿಂದ ಕೆಲಕಾಲ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಬಹುದು. ಆದರೆ ಹಿಮನದಿಗಳ ಪ್ರಮಾಣ ನಿರಂತರವಾಗಿ ಕುಸಿದರೆ ಮುಂದಿನ ದಿನಗಳಲ್ಲಿ ನದಿಗಳ ಹರಿವು ತೀವ್ರವಾಗಿ ಕಡಿಮೆಯಾಗುವ ಸಾಧ್ಯತೆಯಿದೆ. ಇದರಿಂದ ಕುಡಿಯುವ ನೀರು, ಕೃಷಿ ಹಾಗೂ ವಿದ್ಯುತ್ ಉತ್ಪಾದನೆ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ಆತಂಕವಿದೆ.
‘ಸಿಸ್ಟಮಿಕ್’ ಸಂಸ್ಥೆಯು ‘ಇಂಟಿಗ್ರೇಟೆಡ್ ಮೌಂಟನ್ ಇನಿಶಿಯೇಟಿವ್’, ICIMOD ಮತ್ತು ‘ಜಿಬಿ ಪಂತ್ ರಾಷ್ಟ್ರೀಯ ಹಿಮಾಲಯನ್ ಪರಿಸರ ಸಂಸ್ಥೆ’ಗಳ ಸಹಯೋಗದಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಪ್ರಸ್ತುತ ಪರಿಸ್ಥಿತಿ ಮುಂದುವರಿದರೆ 2100ರ ವೇಳೆಗೆ ಹಿಂದು ಕುಶ್ ಹಿಮಾಲಯ ಪ್ರದೇಶದ ಶೇ.80ರಷ್ಟು ಹಿಮನದಿಗಳು ನಾಶವಾಗುವ ಅಪಾಯವಿದೆ. ಹಿಂದು ಕುಶ್ ಹಿಮಾಲಯ ವಲಯದಲ್ಲಿ ಸುಮಾರು 40,000 ಹಿಮನದಿಗಳಿದ್ದು, ಅವುಗಳಲ್ಲಿ ಕೇವಲ 21 ಹಿಮನದಿಗಳನ್ನು ಮಾತ್ರ ತಾಂತ್ರಿಕವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆಎಂಬುದು ಮತ್ತೊಂದು ಆತಂಕಕಾರಿ ಅಂಶವಾಗಿದೆ.
ಕಾಡ್ಗಿಚ್ಚು, ಸೌದೆ ಮತ್ತು ಬಯೋಮಾಸ್ ಸುಡುವಿಕೆ, ಡೀಸೆಲ್ ವಾಹನಗಳು, ಇಟ್ಟಿಗೆ ಭಟ್ಟಿಗಳು ಹಾಗೂ ಕೈಗಾರಿಕೆಗಳಿಂದ ಹೊರಸೂಸುವ ಕಪ್ಪು ಇಂಗಾಲದ ಕಣಗಳು ವಾತಾವರಣದಲ್ಲಿ ಹರಡಿ ಹಿಮನದಿಗಳ ಮೇಲೆ ಶೇಖರಣೆಯಾಗುತ್ತವೆ. ಬಿಳಿ ಹಿಮದ ಮೇಲೆ ಕಪ್ಪು ಕಣಗಳು ಸಂಗ್ರಹವಾದಾಗ ಸೂರ್ಯನ ಶಾಖವನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳುತ್ತವೆ. ಇದರಿಂದ ಹಿಮನದಿಯ ಮೇಲ್ಮೈ ಬಿಸಿಯಾಗಿ ಹಿಮ ಕರಗುವ ವೇಗ ಹೆಚ್ಚುತ್ತದೆ. ಹಿಮನದಿಗಳ ಕರಗುವಿಕೆಯಿಂದ ಉಂಟಾಗುತ್ತಿರುವ ಹಾನಿಯ ಸುಮಾರು ಮೂರನೇ ಒಂದು ಭಾಗಕ್ಕೆ ಕಪ್ಪು ಇಂಗಾಲ ಕಾರಣವಾಗಿರಬಹುದು ಎಂದು ಅಧ್ಯಯನ ಎಚ್ಚರಿಸಿದೆ.
ಹಿಮಾಲಯದ ಹಿಮನದಿಗಳು ಏಷ್ಯಾದ ಹಲವು ಪ್ರಮುಖ ನದಿಗಳಿಗೆ ನೀರಿನ ಮೂಲವಾಗಿವೆ. ಹಿಮನದಿಗಳ ಕ್ಷೀಣತೆ ಮುಂದುವರಿದರೆ ಕೋಟ್ಯಂತರ ಜನರು ಕುಡಿಯುವ ನೀರು ಹಾಗೂ ಕೃಷಿ ನೀರಿನ ಕೊರತೆಯನ್ನು ಎದುರಿಸಬೇಕಾಗಬಹುದು. ವಿಶೇಷವಾಗಿ ಗಂಗಾ ನದಿ ಜಲಾನಯನ ಪ್ರದೇಶದಲ್ಲಿರುವ ಉತ್ತರ ಭಾರತದ ವಿಶಾಲ ಕೃಷಿ ಭೂಮಿಗಳು ಹಿಮಾಲಯದಿಂದ ಹರಿದುಬರುವ ನದಿಗಳ ನೀರನ್ನೇ ಅವಲಂಬಿಸಿವೆ. ನದಿಗಳ ಹರಿವು ಕಡಿಮೆಯಾದರೆ ಕೃಷಿ ಉತ್ಪಾದನೆ ಕುಸಿತ, ಕುಡಿಯುವ ನೀರಿನ ಕೊರತೆ ಮತ್ತು ಆಹಾರ ಭದ್ರತೆಗೆ ಸವಾಲು ಎದುರಾಗುವ ಸಾಧ್ಯತೆಯಿದೆ. ಹಿಮನದಿಗಳು ವೇಗವಾಗಿ ಕರಗುತ್ತಿರುವ ಪರಿಣಾಮ ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ತಾತ್ಕಾಲಿಕ ಹಿಮ ಸರೋವರಗಳು ನಿರ್ಮಾಣವಾಗುತ್ತಿವೆ. ಇವು ಒಡೆದುಹೋದರೆ ಹಠಾತ್ ಭಾರೀ ಪ್ರವಾಹ, ಭೂಕುಸಿತ ಮತ್ತು ಮೂಲಸೌಕರ್ಯ ಹಾನಿ ಉಂಟಾಗುವ ಅಪಾಯವಿದೆ.
ಅಧ್ಯಯನವು ಹಿಮಾಲಯ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಹಲವು ಕ್ರಮಗಳನ್ನು ಸೂಚಿಸಿದೆ. ಅವುಗಳಲ್ಲಿ ಪ್ರಮುಖವಾಗಿ: ಕಪ್ಪು ಇಂಗಾಲ ಮತ್ತು ಮಸಿ ಹೊರಸೂಸುವಿಕೆಯನ್ನು ತಕ್ಷಣ ನಿಯಂತ್ರಿಸುವುದು, ಕಾಡ್ಗಿಚ್ಚು ಪೀಡಿತ ಅರಣ್ಯ ಪ್ರದೇಶಗಳ ಸಮರ್ಪಕ ನಿರ್ವಹಣೆ, ಹಿಮಾಲಯದ ಕಣ್ಮರೆಯಾಗುತ್ತಿರುವ ಚಿಲುಮೆಗಳನ್ನು ಪುನರುಜ್ಜೀವನಗೊಳಿಸುವುದು, ಹಿಮಾಲಯ ಪ್ರವಾಸೋದ್ಯಮದ ಮೇಲೆ ಸೂಕ್ತ ನಿಯಂತ್ರಣ ಹೇರುವುದು, ಪ್ರದೇಶದ ಪರಿಸರದ ಹೊರೆ ಹೊರುವ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರವಾಸಿಗರ ಸಂಖ್ಯೆಯನ್ನು ಮಿತಿಗೊಳಿಸುವುದು.
ಒಟ್ಟಿನಲ್ಲಿ, ಹಿಮಾಲಯದ ಹಿಮನದಿಗಳ ಕರಗುವಿಕೆ ಕೇವಲ ಪರಿಸರ ಸಮಸ್ಯೆಯಲ್ಲ. ಇದು ಮುಂದಿನ ದಿನಗಳಲ್ಲಿ ಭಾರತದ ನೀರು, ಕೃಷಿ, ಆಹಾರ ಭದ್ರತೆ ಮತ್ತು ಕೋಟ್ಯಂತರ ಜನರ ಜೀವನದ ಮೇಲೆ ನೇರ ಪರಿಣಾಮ ಬೀರುವ ಗಂಭೀರ ಸವಾಲು ಎಂಬ ಎಚ್ಚರಿಕೆಯನ್ನು ಅಧ್ಯಯನಗಳು ನೀಡಿವೆ.