ಮುಂಬೈ, ಸೆ.15 (DaijiworldNews/TA): ನವಿ ಮುಂಬೈನ ಸಾನ್ಪಾಡಾ ಸೆಕ್ಟರ್-1ರ ರೆಸ್ಟೋರೆಂಟ್ವೊಂದರಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ಸ್ಫೋಟದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಸುತ್ತಮುತ್ತಲಿನ ಹಲವು ಮಳಿಗೆಗಳಿಗೆ ಹಾನಿಯಾಗಿದೆ. ಸ್ಫೋಟದ ತೀವ್ರತೆಗೆ ಸಮೀಪದ 5-6 ಅಂಗಡಿಗಳ ಶಟರ್ಗಳು ಕಿತ್ತುಬಂದಿದ್ದು, ಸುಮಾರು 100 ಮೀಟರ್ ದೂರದಲ್ಲಿದ್ದ ಆಸ್ಪತ್ರೆಯ ಗಾಜುಗಳೂ ಒಡೆದುಹೋಗಿವೆ.

ಮೇಲ್ನೋಟಕ್ಕೆ ಗ್ಯಾಸ್ ಸಿಲಿಂಡರ್ನಿಂದ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ಘಟನೆ ಕುರಿತು ಪೊಲೀಸರು ಹಾಗೂ ವಿಧಿವಿಜ್ಞಾನ ತಜ್ಞರು ತನಿಖೆ ನಡೆಸುತ್ತಿದ್ದಾರೆ. ಸಾನ್ಪಾಡಾ ಸೆಕ್ಟರ್-1ರ ಪ್ರತೀಕ್ಷಾ ಕಟ್ಟಡದಲ್ಲಿರುವ ‘ಸಾಗರ್ ಫ್ಯಾಮಿಲಿ ರೆಸ್ಟೋರೆಂಟ್’ ಒಳಗೆ ಸ್ಫೋಟ ಸಂಭವಿಸಿದೆ. ಮುಂಜಾನೆ ಯಾವುದೇ ಮುನ್ಸೂಚನೆ ಇಲ್ಲದೆ ಸಂಭವಿಸಿದ ಸ್ಫೋಟದ ಸದ್ದು ಸುಮಾರು ಒಂದು ಕಿಲೋಮೀಟರ್ ದೂರದವರೆಗೂ ಕೇಳಿಸಿದೆ. ಇದರಿಂದ ಮುಂಜಾನೆ ವಾಯುವಿಹಾರಕ್ಕೆ ತೆರಳಿದ್ದ ಸಾರ್ವಜನಿಕರು ಆತಂಕಕ್ಕೊಳಗಾದರು.
ಸ್ಫೋಟದ ವೇಳೆ ರೆಸ್ಟೋರೆಂಟ್ನಲ್ಲಿ ತಂಗಿದ್ದ ಇಬ್ಬರು ವ್ಯಕ್ತಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ವಾಶಿಯಲ್ಲಿರುವ ನವಿ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (NMMC) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಸ್ಫೋಟದ ಬಳಿಕ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಳ್ಳದ ಕಾರಣ ಸಂಭವಿಸಬಹುದಾಗಿದ್ದ ಮತ್ತೊಂದು ಭಾರೀ ಅಗ್ನಿ ದುರಂತ ತಪ್ಪಿದೆ.
ಸ್ಫೋಟದ ತೀವ್ರತೆಗೆ ರೆಸ್ಟೋರೆಂಟ್ ಸುತ್ತಮುತ್ತಲಿನ 5-6 ಮಳಿಗೆಗಳ ಶಟರ್ಗಳು ಕಿತ್ತುಬಂದಿವೆ. ರಸ್ತೆ ಹಾಗೂ ಫ್ಲೈಓವರ್ನ ಆಚೆ ಸುಮಾರು 100 ಮೀಟರ್ ದೂರದಲ್ಲಿದ್ದ ಸೂರಜ್ ಆಸ್ಪತ್ರೆಯ ಗಾಜುಗಳೂ ಒಡೆದಿವೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು, ಬಾಂಬ್ ಪತ್ತೆ ತಂಡ ಹಾಗೂ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟದ ಅವಶೇಷಗಳು ಹಾಗೂ ವಿವಿಧ ಮಾದರಿಗಳನ್ನು ಸಂಗ್ರಹಿಸಲಾಗಿದೆ.
ರಾತ್ರಿ ವೇಳೆ ಗ್ಯಾಸ್ ಸಿಲಿಂಡರ್ನ ವಾಲ್ವ್ನಿಂದ ಅನಿಲ ಸೋರಿಕೆಯಾಗಿ ಕೊಠಡಿಯಲ್ಲಿ ಸಂಗ್ರಹವಾಗಿತ್ತೇ ಅಥವಾ ಮುಂಜಾನೆ ವಿದ್ಯುತ್ ಸ್ವಿಚ್ ಆನ್ ಮಾಡಿದಾಗ ಉಂಟಾದ ಸ್ಪಾರ್ಕ್ನಿಂದ ಸ್ಫೋಟ ಸಂಭವಿಸಿತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ವಸತಿ ಕಟ್ಟಡದ ಕೆಳಭಾಗದಲ್ಲಿರುವ ರೆಸ್ಟೋರೆಂಟ್ನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬಳಕೆಗೆ ಅಗತ್ಯವಿರುವ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗಿತ್ತೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ರೆಸ್ಟೋರೆಂಟ್ಗೆ ಅಗತ್ಯವಿರುವ ಅಗ್ನಿಶಾಮಕ ಪರವಾನಗಿ ಹಾಗೂ ಸುರಕ್ಷತಾ ಅನುಮತಿಗಳು ಇದ್ದವೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.