ಬೆಂಗಳೂರು, ಸೆ.15 (DaijiworldNews/TA): ಇಂಜಿನಿಯರ್ಗಳ ಕೊಡುಗೆಯನ್ನು ಗುರುತಿಸುವ ಉದ್ದೇಶದಿಂದ ಮುಂದಿನ ವರ್ಷದಿಂದ ರಾಜ್ಯ ಸರ್ಕಾರದ ವತಿಯಿಂದಲೇ ‘ಇಂಜಿನಿಯರ್ಸ್ ಡೇ’ ಆಚರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.

ಇಂಜಿನಿಯರ್ಗಳ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಸರ್ಕಾರದ ಪರವಾಗಿ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಆಚರಣೆಯ ರೂಪುರೇಷೆಗಳನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು. “ಅಭಿವೃದ್ಧಿಗೆ ಅಡಿಪಾಯ ಹಾಕುವವರು ಇಂಜಿನಿಯರ್ಗಳು. ವಿಜ್ಞಾನಿಗಳು ನಡೆಸುವ ಸಂಶೋಧನೆಗಳನ್ನು ಕಾರ್ಯರೂಪಕ್ಕೆ ತರುವ ಮಹತ್ವದ ಜವಾಬ್ದಾರಿ ಇಂಜಿನಿಯರ್ಗಳ ಮೇಲಿದೆ. ಇಂಜಿನಿಯರ್ಗಳು ದೇಶದ ಆಸ್ತಿಯಾಗಿದ್ದು, ಅವರ ಕೊಡುಗೆಯನ್ನು ಗುರುತಿಸುವುದು ಸರ್ಕಾರದ ಕರ್ತವ್ಯ” ಎಂದು ಡಿಕೆ ಶಿವಕುಮಾರ್ ಹೇಳಿದರು.
ಕರ್ನಾಟಕದಲ್ಲಿ ಪ್ರತಿವರ್ಷ ಒಂದು ಲಕ್ಷಕ್ಕೂ ಹೆಚ್ಚು ಇಂಜಿನಿಯರ್ಗಳು ಪದವಿ ಪಡೆದು ಹೊರಬರುತ್ತಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಇಂಜಿನಿಯರ್ಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಪ್ರಮುಖ ಸ್ಥಾನದಲ್ಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು. ರಾಜ್ಯದ ಉದ್ದಗಲಕ್ಕೂ ಕಾರ್ಯನಿರ್ವಹಿಸುತ್ತಿರುವ ಇಂಜಿನಿಯರ್ಗಳು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮ ತಾಂತ್ರಿಕ ಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಬೇಕು ಎಂದು ಅವರು ಕರೆ ನೀಡಿದರು.
ಹಿಂದೆ ವಾಸ್ತುಶಿಲ್ಪ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ಇಂಜಿನಿಯರ್ಗಳ ಪಾತ್ರವನ್ನು ಪ್ರಮುಖವಾಗಿ ಗುರುತಿಸಲಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಇಂಧನ, ಕಟ್ಟಡ ನಿರ್ಮಾಣ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇಂಜಿನಿಯರ್ಗಳು ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು. ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್ಗಳ ಸೇವೆ ಅಪಾರವಾಗಿದೆ. ಈ ಹಿನ್ನೆಲೆಯಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರು ದೇಶಕ್ಕೆ ಮಾದರಿಯಾಗಿದ್ದಾರೆ. ಕರ್ನಾಟಕದ ಅಭಿವೃದ್ಧಿಗೆ ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರವಾಗಿದ್ದು, ಅವರ ಆದರ್ಶ ಮತ್ತು ಸಾಧನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.