ನವದೆಹಲಿ, ಸೆ.15 (DaijiworldNews/AA): 2,000 ರೂ. ವರೆಗೆ ನಡೆಯುವ ಯುಪಿಐ ವಹಿವಾಟುಗಳಿಗೆ ಯಾವುದೇ ನೇರ ಅಥವಾ ಪರೋಕ್ಷ ಶುಲ್ಕ ವಿಧಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದೇ ಶುಲ್ಕ ವಿನಾಯಿತಿ ರೂಪೇ ಡೆಬಿಟ್ ಕಾರ್ಡ್ ಪಾವತಿಗಳಿಗೂ ಅನ್ವಯವಾಗಲಿದೆ.

ಬ್ಯಾಂಕ್ಗಳು ಅಥವಾ ಪಾವತಿ ವ್ಯವಸ್ಥೆ ಒದಗಿಸುವ ಸಂಸ್ಥೆಗಳು ಇಂತಹ ವಹಿವಾಟುಗಳಿಗೆ ಗ್ರಾಹಕರಿಂದ ಯಾವುದೇ ಶುಲ್ಕ ವಸೂಲಿ ಮಾಡುವಂತಿಲ್ಲ. ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ 2007ರ ತಿದ್ದುಪಡಿ ನಿಯಮಗಳ ಅಡಿಯಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಈ ಅಧಿಸೂಚನೆ ಹೊರಡಿಸಿದೆ.
ಸದ್ಯದ ಅಧಿಸೂಚನೆಯ ಪ್ರಮುಖ ಅಂಶವೆಂದರೆ, 2,000 ರೂ.ಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸುವ ಸಾಧ್ಯತೆಗೆ ಅವಕಾಶ ಕಲ್ಪಿಸಿರುವುದು. ಆದರೆ ಇಂತಹ ವಹಿವಾಟುಗಳಿಗೆ ಶುಲ್ಕ ವಿಧಿಸುವುದೇ ಅಥವಾ ಇಲ್ಲವೇ, ವಿಧಿಸಿದರೆ ಎಷ್ಟು ಶುಲ್ಕ ಮತ್ತು ಯಾವ ರೀತಿಯಲ್ಲಿ ವಿಧಿಸಲಾಗುತ್ತದೆ ಎಂಬುದರ ಅಧಿಸೂಚನೆಯಲ್ಲಿ ಯಾವುದೇ ಅಂತಿಮ ನಿರ್ಧಾರ ಹೊರಬಿದ್ದಿಲ್ಲ. ಸಣ್ಣ ಮೊತ್ತದ ಡಿಜಿಟಲ್ ಪಾವತಿಗಳಿಗೆ ಶುಲ್ಕದ ಹೊರೆ ಬಾರದಂತೆ ನೋಡಿಕೊಳ್ಳುವುದು ಸರ್ಕಾರದ ನಿರ್ಧಾರದ ಪ್ರಮುಖ ಉದ್ದೇಶ.